SK Home Ad
Home ನಮ್ಮ ಜಿಲ್ಲೆ ರಾಯಚೂರು PhonePe ಮೂಲಕ ಲಂಚ: PDO ಹಾಗೂ ಪತಿ ಲೋಕಾಯುಕ್ತ ಬಲೆಗೆ

PhonePe ಮೂಲಕ ಲಂಚ: PDO ಹಾಗೂ ಪತಿ ಲೋಕಾಯುಕ್ತ ಬಲೆಗೆ

0
193

ರಾಯಚೂರು: ನಿವೇಶನಗಳಿಗೆ ಖಾತೆ ಮಾಡಿಕೊಡಲು ಭಾರೀ ಪ್ರಮಾಣದ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ರಾಯಚೂರು ತಾಲ್ಲೂಕಿನಲ್ಲಿ ಬುಧವಾರ ನಡೆದಿದೆ.

ರಾಯಚೂರು ತಾಲ್ಲೂಕಿನ ಬೀಜನಗೆರಾ ಗ್ರಾಮ ಪಂಚಾಯಿತಿಯ ಪಿಡಿಒ ಲಕ್ಷ್ಮೀ ಅವರು, ಉಮ್ರಾಳದೊಡ್ಡಿ ಗ್ರಾಮದ ನಿವಾಸಿ ಮಹೆಬೂಬ್ ಎಂಬುವವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಪಿಡಿಒ ಲಕ್ಷ್ಮೀ ಹಾಗೂ ಅವರ ಪತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ

ನಿವೇಶನ ಖಾತೆಗೆ ಲಂಚದ ಬೇಡಿಕೆ : ಮಾಹಿತಿಯ ಪ್ರಕಾರ, ಉಮ್ರಾಳದೊಡ್ಡಿ ಗ್ರಾಮದ ಮಹೆಬೂಬ್ ಅವರು ತಮ್ಮ 2 ಎಕರೆ 6 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದು, ಆ ಬಡಾವಣೆಯಲ್ಲಿನ ನಿವೇಶನಗಳಿಗೆ ಖಾತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ, ಖಾತೆ ಮಾಡಿಕೊಡುವ ಪ್ರಕ್ರಿಯೆ ಪೂರ್ಣಗೊಳಿಸಲು ಪಿಡಿಒ ಲಕ್ಷ್ಮೀ ಅವರು ₹2.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಂತರ, ಮೊದಲ ಕಂತಾಗಿ ₹1.50 ಲಕ್ಷವನ್ನು ತಮ್ಮ ಪತಿಯ ಫೋನ್‌ಪೇ ಖಾತೆಗೆ ಜಮೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರೆಂದು ಆರೋಪಿಸಲಾಗಿದೆ.

ದೂರುದಾರ ಮಹೆಬೂಬ್ ಅವರು ಪಿಡಿಒ ಅವರ ಪತಿಯ ಖಾತೆಗೆ ಫೋನ್‌ಪೇ ಮೂಲಕ ₹1.50 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಉಳಿದ ಹಣವನ್ನು ನಂತರ ನೀಡುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ: ಅಯೋಧ್ಯೆಯ ರಾಮ ಮಂದಿರ ಗುರಿಯಾಗಿತ್ತೇ?

ಸ್ಕ್ರೀನ್‌ಶಾಟ್ ಸಮೇತ ಲೋಕಾಯುಕ್ತರಿಗೆ ದೂರು : ಲಂಚದ ಹಣವನ್ನು ಫೋನ್‌ಪೇ ಮೂಲಕ ಪಾವತಿಸಿದ ನಂತರ, ದೂರುದಾರ ಮಹೆಬೂಬ್ ಅವರು ಹಣ ವರ್ಗಾವಣೆ ಮಾಡಿರುವ ಸ್ಕ್ರೀನ್‌ಶಾಟ್‌ಗಳೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಪಿಡಿಒ ಲಕ್ಷ್ಮೀ ಹಾಗೂ ಅವರ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.