SK Home Ad
Home ನಮ್ಮ ಜಿಲ್ಲೆ ಮೈಸೂರು ಮಾಜಿ ಪ್ರೇಮಿಯ ಕಾಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮಾಜಿ ಪ್ರೇಮಿಯ ಕಾಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

0
218

ಸಂ.ಕ. ಸಮಾಚಾರ ಮೈಸೂರು : ಮಾಜಿ ಪ್ರೇಮಿಯ ಕಿರುಕುಳವನ್ನು ತಡೆಯಲಾಗದೆ ಯುವತಿ ಸೇರಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ನಿವಾಸಿಗಳಾದ ಶಿವಣ್ಣ (54), ಅವರ ಪತ್ನಿ ನಾಗರತ್ನ (48) ಹಾಗೂ ಪುತ್ರಿ ರಕ್ಷಿತಾ (21) ಮೃತಪಟ್ಟವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಉಲ್ಲಾಸ್ ಗೌಡ ವಿರುದ್ಧ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ e-mail: ತೀವ್ರ ತಪಾಸಣೆ

ಸ್ಥಳೀಯರ ಮಾಹಿತಿ ಪ್ರಕಾರ, ರಕ್ಷಿತಾ ಮತ್ತು ಉಲ್ಲಾಸ್ ಗೌಡ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಮದುವೆಗೆ ಕುಟುಂಬದ ಒಪ್ಪಿಗೆ ದೊರೆತಿರಲಿಲ್ಲ. ಬಳಿಕ ರಕ್ಷಿತಾಗೆ ಕುಟುಂಬಸ್ಥರು ಬೇರೆ ವಿವಾಹ ನಿಶ್ಚಯ ಮಾಡಿದ್ದರು. ಇನ್ನೆರಡು ದಿನಗಳಲ್ಲಿ ಮದುವೆ ನಡೆಯಬೇಕಿತ್ತು ಎನ್ನಲಾಗಿದೆ.

ಈ ನಡುವೆ, ರಕ್ಷಿತಾ ಕಳುಹಿಸಿದ್ದ ಸಂದೇಶಗಳು ಮತ್ತು ಛಾಯಾಚಿತ್ರಗಳನ್ನು ವರನಿಗೆ ಕಳುಹಿಸಿ ಮದುವೆ ನಿಲ್ಲಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಮನೆಯಲ್ಲಿ ಮೂವರು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: CBSE 12ನೇ ತರಗತಿ ಮರುಮೌಲ್ಯಮಾಪನ ಫಲಿತಾಂಶ ಬಿಡುಗಡೆ

ಆತ್ಮಹತ್ಯೆಗೆ ಮುನ್ನ ರಕ್ಷಿತಾ ಡೆತ್‌ನೋಟ್ ಬರೆದಿಟ್ಟು, ತಮ್ಮ ಕುಟುಂಬದ ಈ ನಿರ್ಧಾರಕ್ಕೆ ಉಲ್ಲಾಸ್ ಗೌಡ ಕಾರಣ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಡೆತ್‌ನೋಟ್ ವಶಪಡಿಸಿಕೊಂಡಿರುವ ಟಿ. ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಘಟನೆ ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.