ಬಿಹಾರದಲ್ಲಿ ಸಾಮಾಜಿಕ ಕಾರ್ಯಕರ್ತ ಭರತ್ ಭೂಷಣ್ ತಿವಾರಿ “ನಕಲಿ ಎನ್‌ಕೌಂಟರ್” ನಡೆದಿದೆ ಎಂದು ಆರೋಪಿಸಿ, ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಾಗಿದೆ. ವಕೀಲ ವಿಶಾಲ್ ತಿವಾರಿ ಭಾನುವಾರ ಈ ಅರ್ಜಿಯನ್ನು ಸಲ್ಲಿಸಿದ್ದು, ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಬಿಹಾರ ಪೊಲೀಸ್ ತಂಡದ ಪ್ರತಿಯೊಬ್ಬ ಸದಸ್ಯರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೇ ಅರ್ಜಿದಾರ ವಕೀಲರು ತಮ್ಮ ಅರ್ಜಿಯಲ್ಲಿ, ಈ ನ್ಯಾಯಾಂಗೇತರ ಹತ್ಯೆಯ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸುವ ಮೂಲಕ “ಕಾನೂನಿನ ನಿಯಮವನ್ನು” ಕಾಪಾಡಬೇಕು ಎಂದು ಕೋರಿದ್ದಾರೆ. ಆರೋಪಿಗಳು ಪೊಲೀಸರ ಪಿಸ್ತೂಲ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತು ಎಂಬ ಪೊಲೀಸರ ಸಿದ್ಧ ಸೂತ್ರದ ಹೇಳಿಕೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಹೆಚ್ಚಿನ ಎನ್‌ಕೌಂಟರ್ ಪ್ರಕರಣಗಳಲ್ಲಿ ಪೊಲೀಸರು ಇದೇ ರೀತಿಯ ಸಾಮಾನ್ಯ ಕಾರಣಗಳನ್ನು ನೀಡಿ ತನಿಖೆಯಿಂದ ತಪ್ಪಿಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಜೂನ್ 17ರ ಬುಧವಾರದಂದು ಈ ಎನ್‌ಕೌಂಟರ್ ನಡೆದಿತ್ತು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಮತ್ತು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದ ಭರತ್ ಭೂಷಣ್ ತಿವಾರಿ ಸಾವಿನ ಕುರಿತು ಬಿಹಾರ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಆದ್ರೆ ಆಡಳಿತ ಪಕ್ಷದ ನಾಯಕರು ಸೇರಿದಂತೆ ಹಲವರು ಈ ಎನ್‌ಕೌಂಟರ್‌ನ ಸತ್ಯಾಸತ್ಯತೆಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಘಟನೆಯು ಸ್ಥಳೀಯವಾಗಿ ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಸಂತ್ರಸ್ತರಿಗೆ ನ್ಯಾಯಾಂಗ ಪರಿಹಾರ ಸಿಗದಂತೆ ಮಾಡುವ ಇಂತಹ ನ್ಯಾಯಾಂಗೇತರ ಹತ್ಯೆಗಳು ಮತ್ತು “ಎನ್‌ಕೌಂಟರ್ ಸಂಸ್ಕೃತಿ”ಯ ವಿರುದ್ಧ ಉನ್ನತ ಮಟ್ಟದ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.





















