SK Home Ad
Home ಸುದ್ದಿ ವಿದೇಶ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ

0
88

ಲಂಡನ್: ಹೆಚ್ಚುತ್ತಿರುವ ರಾಜಕೀಯ ಒತ್ತಡ ಮತ್ತು ಆಡಳಿತಾರೂಢ ಲೇಬರ್ ಪಕ್ಷದೊಳಗಿನ ತೀವ್ರ ಅಸಮಾಧಾನದ ನಡುವೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಬೆಂಬಲ ಕುಸಿದ ಹಿನ್ನೆಲೆಯಲ್ಲಿ ಅವರು ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.

ರಾಜೀನಾಮೆ ಘೋಷಿಸಿ ಮಾತನಾಡಿದ ಸ್ಟಾರ್ಮರ್, “ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ನಾನೇ ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ನನ್ನ ಪಕ್ಷ ಕೇಳಿತ್ತು. ಸಂಸದೀಯ ಪಕ್ಷ ನೀಡಿದ ಉತ್ತರವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ಆದ್ದರಿಂದ ಲೇಬರ್ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ e-mail: ತೀವ್ರ ತಪಾಸಣೆ

“ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ದೇಶವನ್ನು ಮೊದಲ ಸ್ಥಾನದಲ್ಲಿಟ್ಟು ಕೈಗೊಂಡದ್ದಾಗಿದೆ. ನನ್ನ ನಂತರ ಬರುವ ನಾಯಕನಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಮತ್ತು ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿರುವಂತೆ ನೋಡಿಕೊಳ್ಳುತ್ತೇನೆ” ಎಂದೂ ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್ ಪಕ್ಷ ಹಿನ್ನಡೆ ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿಯೂ ಸೋಲು ಕಂಡ ಪರಿಣಾಮ ಸ್ಟಾರ್ಮರ್ ನಾಯಕತ್ವದ ವಿರುದ್ಧ ಅಸಮಾಧಾನ ಹೆಚ್ಚಾಗಿತ್ತು. ವಲಸೆ ನೀತಿ, ಇಂಧನ ಸಮಸ್ಯೆ ಹಾಗೂ ಹಲವು ವಿವಾದಾತ್ಮಕ ನಿರ್ಧಾರಗಳು ಸರ್ಕಾರದ ಜನಪ್ರಿಯತೆಗೆ ಧಕ್ಕೆಯುಂಟು ಮಾಡಿದ್ದವು.

ಇದನ್ನೂ ಓದಿ: CBSE 12ನೇ ತರಗತಿ ಮರುಮೌಲ್ಯಮಾಪನ ಫಲಿತಾಂಶ ಬಿಡುಗಡೆ

ಇದೇ ವೇಳೆ, ಸ್ಟಾರ್ಮರ್ ಅವರ ಪ್ರಮುಖ ರಾಜಕೀಯ ಎದುರಾಳಿಯಾಗಿ ಪರಿಗಣಿಸಲಾಗುತ್ತಿರುವ ಆಂಡಿ ಬರ್ನ್‌ಹ್ಯಾಮ್ (Andy Burnham) ಇತ್ತೀಚೆಗೆ ಉಪಚುನಾವಣೆಯಲ್ಲಿ ಜಯ ಸಾಧಿಸಿ ಸಂಸತ್ ಪ್ರವೇಶಿಸಿರುವುದು ಲೇಬರ್ ಪಕ್ಷದೊಳಗಿನ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದೆ. ಮುಂದಿನ ನಾಯಕತ್ವ ಸ್ಪರ್ಧೆಯಲ್ಲಿ ಅವರೇ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದಾರೆ.

ರಕ್ಷಣಾ ವೆಚ್ಚ ಸೇರಿದಂತೆ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸಿ ಹಲವು ಸಚಿವರು ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಅಮೆರಿಕದ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ (Peter Mandelson) ಅವರನ್ನು ನೇಮಕ ಮಾಡಿದ್ದ ವಿಚಾರವೂ ಸ್ಟಾರ್ಮರ್ ಸರ್ಕಾರಕ್ಕೆ ತೀವ್ರ ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ: NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ

ಕೀರ್ ಸ್ಟಾರ್ಮರ್ ಅವರು 2024ರ ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದರು. 650 ಸ್ಥಾನಗಳ ಪೈಕಿ 410ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದ್ದ ಲೇಬರ್ ಪಕ್ಷ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಕೇವಲ ಎರಡು ವರ್ಷಗಳಲ್ಲೇ ತಮ್ಮದೇ ಪಕ್ಷದ ಬೆಂಬಲ ಕಳೆದುಕೊಂಡು ಅವರು ಅಧಿಕಾರ ತ್ಯಜಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಈಗ ಲೇಬರ್ ಪಕ್ಷದ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಜುಲೈ 9ರಿಂದ ಆರಂಭವಾಗಲಿದ್ದು, ಪಕ್ಷದ ಮುಂದಿನ ದಿಕ್ಕಿನ ಬಗ್ಗೆ ಬ್ರಿಟನ್ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿದೆ.