SK Home Ad
Home ನಮ್ಮ ಜಿಲ್ಲೆ ಮೈಸೂರು ರಾಜ್ಯದ ಹಿತ ಕಾಪಾಡಿ, ತಮಿಳುನಾಡಿನ ವಾಟರ್‌ಮ್ಯಾನ್ ಆಗಬೇಡಿ

ರಾಜ್ಯದ ಹಿತ ಕಾಪಾಡಿ, ತಮಿಳುನಾಡಿನ ವಾಟರ್‌ಮ್ಯಾನ್ ಆಗಬೇಡಿ

0
45
File Photo

ಸಂ.ಕ. ಸಮಾಚಾರ ಮೈಸೂರು : ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ವಾಟರ್‌ಮ್ಯಾನ್ ಆಗಬಾರದು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರದಲ್ಲಿದ್ದೀರಿ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮಾದರಿಯಲ್ಲಿ ನೀರು ಬಿಡುವುದಿಲ್ಲ ಎಂದು ದೃಢವಾಗಿ ನಿಲ್ಲಬೇಕು. ನಿಮ್ಮ ಜೊತೆ ನಾವು ಇರುತ್ತೇವೆ” ಎಂದು ಹೇಳಿದರು.

ರಾಜ್ಯದ ಜಲಾಶಯಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಮೊದಲು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ನೀರಿನ ಕೊರತೆ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ಹೇಗೆ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ರೈತರ ಹಿತಾಸಕ್ತಿಗಾಗಿ ಬಿಜೆಪಿ ಹೋರಾಟ ನಡೆಸುತ್ತಿದ್ದು, ಇದು ಯಾವುದೇ ರಾಜಕೀಯ ಹೊಂದಾಣಿಕೆಯ ಹೋರಾಟವಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಮುಂದೆ ಜೀತದಾಳುಗಳಂತೆ ನಿಲ್ಲಬೇಡಿ : ಇದೇ ವೇಳೆ ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಕುರಿತು ಮಾತನಾಡಿದ ಸಿ.ಟಿ. ರವಿ, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ಮನೆಬಾಗಿಲು ಕಾಯುತ್ತಿರುವುದು ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದೆ ಎಂದು ಟೀಕಿಸಿದರು.

“ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಜೀತದಾಳುಗಳಂತೆ ನೋಡುತ್ತಿದೆ. ತಿಂಗಳುಗಟ್ಟಲೆ ಕಾಯುವ ಬದಲು ಸ್ವಾಭಿಮಾನ ಪ್ರದರ್ಶಿಸಿ, ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ” ಎಂದು ಅವರು ಹೇಳಿದರು.

ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ ಯಾಕೆ? : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ತಿಂಗಳಿಂದ ತಮಿಳುನಾಡಿಗೆ ನೀರು ಹರಿಸಿ ಈಗ ಸರ್ವಪಕ್ಷ ಸಭೆ ಕರೆಯುತ್ತಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು.

“ನೀರು ಹೋಗಿಬಿಟ್ಟ ನಂತರ ವಿರೋಧ ಪಕ್ಷಗಳ ಸಲಹೆ ಯಾವ ಪ್ರಯೋಜನಕ್ಕೆ ಬರುತ್ತದೆ? ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ಜಲಾಶಯಗಳಲ್ಲಿ ನೀರು ಉಳಿಸಿಕೊಳ್ಳುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರ ಆಂತರಿಕ ರಾಜಕೀಯ ಮತ್ತು ಕುರ್ಚಿ ಜಗ್ಗಾಟದಲ್ಲೇ ಮುಳುಗಿತ್ತು” ಎಂದು ಆರೋಪಿಸಿದರು.

ಸಂಪುಟ ವಿಸ್ತರಣೆ ರಾಜಕೀಯದಲ್ಲೇ ಮುಖ್ಯಮಂತ್ರಿ ಸಮಯ ವ್ಯರ್ಥವಾಗಿದ್ದು, ನೀರಿನ ವಿಚಾರದಲ್ಲಿ ಕಾನೂನು ತಜ್ಞರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು. ಬಿಜೆಪಿ ಸದಾಕಾಲ ರೈತರ ಹಿತಾಸಕ್ತಿಯ ಪರವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.

ರೈತರ ಹಿತ ಕಾಯಲು ಸರ್ಕಾರ ಬದ್ಧರಾಗಬೇಕು. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸರ್ಕಾರ ತಕ್ಷಣವೇ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು. ಯಾವುದೇ ಕಾರಣಕ್ಕು ತಮಿಳುನಾಡಿಗೆ ನೀರು ಬಿಡಬಾರದು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಕಾವೇರಿ ನೀರು ಹಂಚಿಕೆ ವಿಚಾರ ರಾಜ್ಯದಲ್ಲಿ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳತ್ತ ರೈತರು ಮತ್ತು ಸಾರ್ವಜನಿಕರ ಗಮನ ನೆಟ್ಟಿದೆ.