SK Home Ad
Home ಸಿನಿ ಮಿಲ್ಸ್ ‘ಕಾಕ್ಟೇಲ್ 2’ ಮೊದಲ ದಿನವೇ ಫ್ಲಾಪ್: ರಶ್ಮಿಕಾ ಮಂದಣ್ಣ ನಟನೆಗೆ ನೆಟ್ಟಿಗರ ತೀವ್ರ ಟೀಕೆ!

‘ಕಾಕ್ಟೇಲ್ 2’ ಮೊದಲ ದಿನವೇ ಫ್ಲಾಪ್: ರಶ್ಮಿಕಾ ಮಂದಣ್ಣ ನಟನೆಗೆ ನೆಟ್ಟಿಗರ ತೀವ್ರ ಟೀಕೆ!

0
30

ಬೆಂಗಳೂರು: ಭಾರಿ ಬಜೆಟ್ ಹಾಗೂ ದೊಡ್ಡ ಮಟ್ಟದ ಪ್ರಚಾರದೊಂದಿಗೆ ಇಂದು (ಜೂನ್ 19) ಬಿಡುಗಡೆಯಾದ ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ ಸಿನಿಮಾ ಮೊದಲ ದಿನವೇ ಪ್ರೇಕ್ಷಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆ ಎದುರಿಸಿದೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಕೇವಲ ಗ್ಲಾಮರ್ ಹೊರತಾಗಿ ಬೇರೇನೂ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ರಶ್ಮಿಕಾ ನಟನೆಗೆ ವ್ಯಾಪಕ ಟೀಕೆ: ಚಿತ್ರ ವೀಕ್ಷಿಸಿದ ಬಹುತೇಕರು ಇದೊಂದು ‘ಅನವಶ್ಯಕ ಸೀಕ್ವೆಲ್’ ಎಂದು ಕರೆದಿದ್ದಾರೆ. ವಿಶೇಷವಾಗಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ ನಟನೆ ಹಾಗೂ ಹಿಂದಿ ಭಾಷೆಯ ಉಚ್ಚಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಈ ಚಿತ್ರದಲ್ಲಿ ತಪ್ಪು ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಶ್ವಜಿತ್ ಪಟೇಲ್ ಎಂಬುವರು, “ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಕಥೆಯೆ ಇಲ್ಲದೇ ಬೋರು ಹೊಡೆಸುವ ಚಿತ್ರವಿದು. ರಶ್ಮಿಕಾ ಹಿಂದಿ ಸಂಭಾಷಣೆ ತೀರಾ ಕಳಪೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಹಾಗೇ ಮತ್ತೊಂದೆಡೆ ಚಿತ್ರದ ಮೇಕಿಂಗ್ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರವು ಸ್ಟೈಲಿಷ್ ಆಗಿದ್ದು, ದೃಶ್ಯಗಳು ಶ್ರೀಮಂತವಾಗಿವೆ ಮತ್ತು ಸಂಗೀತ ಉತ್ತಮವಾಗಿದೆ ಎಂದು ಮಿಸ್ಟರ್ ಎಸ್ಪಿ ಎಂಬುವರು ಟ್ವೀಟ್ ಮಾಡಿದ್ದಾರೆ. ಆದ್ರೆ ಅವರು ಕೂಡ ನಟಿ ರಶ್ಮಿಕಾ ಪಾತ್ರ ಪೋಷಣೆ ಮತ್ತು ನಾಟಕೀಯ ಸಂಭಾಷಣೆಯನ್ನು ಟೀಕಿಸಿದ್ದಾರೆ.

ಇನ್ನು ಚಿತ್ರದ ಕಥೆಯ ಬಗ್ಗೆ ಬರೆದುಕೊಂಡಿರುವ ನಿತೀಷ್ ಶಾ, “ನಿರ್ದೇಶಕ ಲವ್ ರಂಜನ್’ತು ಜೂಠಿ ಮೈ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನೇ ಇಟ್ಟುಕೊಂಡು ಇಡೀ ಸಿನಿಮಾವನ್ನು ಎಳೆದಂತಿದೆ” ಎಂದಿದ್ದಾರೆ. ಚಿತ್ರದಲ್ಲಿ ಅನವಶ್ಯಕ ದೃಶ್ಯಗಳು ತುಂಬಿದ್ದು, ದ್ವಿತೀಯಾರ್ಧವು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ.. ಭಾರಿ ನಿರೀಕ್ಷೆ ಮೂಡಿಸಿದ್ದ ‘ಕಾಕ್ಟೇಲ್ 2’ ಮೊದಲ ದಿನವೇ ಋಣಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ.