SK Home Ad
Home ಸಿನಿ ಮಿಲ್ಸ್ ‘ರಾಮಾಯಣ’ದಲ್ಲಿ ರಾವಣನ ಪಾತ್ರ: ಅಪ್ಪ ಯಶ್‌ಗೆ ಮಗ ಯಥರ್ವ್ ಕೇಳಿದ ಪ್ರಶ್ನೆಗೆ ರಾಕಿ ಭಾಯ್ ಉತ್ತರ?;...

‘ರಾಮಾಯಣ’ದಲ್ಲಿ ರಾವಣನ ಪಾತ್ರ: ಅಪ್ಪ ಯಶ್‌ಗೆ ಮಗ ಯಥರ್ವ್ ಕೇಳಿದ ಪ್ರಶ್ನೆಗೆ ರಾಕಿ ಭಾಯ್ ಉತ್ತರ?; ಇದನ್ನು ಓದಿ

0
21

ಬೆಂಗಳೂರು: ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಪ್ರಪಂಚದಾದ್ಯಂತ ಅಪಾರ ಕುತೂಹಲ ಮೂಡಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಯಶಸ್ವಿಯಾಗಿ ನೆರವೇರಿದ ಬೆನ್ನಲ್ಲೇ, ಯಶ್ ಅವರು ನೀಡಿದ ಸಂದರ್ಶನವೊಂದರಲ್ಲಿ ತಾವು ರಾವಣನ ಪಾತ್ರ ಮಾಡುತ್ತಿರುವುದಕ್ಕೆ ಮಗ ಯಥರ್ವ್ ನೀಡಿದ ವಿಶೇಷ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

ನಿರೂಪಕಿ ಸುಮಾ ಕನಕಾಲ ಅವರ ಸಂದರ್ಶನದಲ್ಲಿ ಮಾತನಾಡಿದ ಯಶ್, “ಮಕ್ಕಳಿಗೆ ತಂದೆಯೇ ಮೊದಲ ಹೀರೋ. ಅಜ್ಜ-ಅಜ್ಜಿಯಿಂದ ರಾಮಾಯಣ ಕಥೆ ಕೇಳಿದ್ದ ನನ್ನ ಮಗ ಯಥರ್ವ್, ನಾನು ರಾವಣನ ಪಾತ್ರ ಮಾಡುತ್ತಿರುವುದು ಕೇಳಿ ಬೇಸರಗೊಂಡಿದ್ದ. ‘ನೀವು ರಾವಣ ಹೇಗೆ ಆಗಲು ಸಾಧ್ಯ, ನೀವು ರಾಮನಲ್ಲವೇ? ಹಾಗಾದರೆ ನೀವು ಕೆಟ್ಟವರಾ?’ ಎಂದು ಪ್ರಶ್ನಿಸಿದ್ದ. ಆಗ ನಾನು ನಿಜ ಜೀವನದಲ್ಲಿ ರಾಮನೇ, ಆದ್ರೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಅವನಿಗೆ ಸಿನಿಮಾ ಹಾಗೂ ನಟನೆಯ ಬಗ್ಗೆ ಸರಳವಾಗಿ ಅರ್ಥೈಸಬೇಕಾಯಿತು” ಎಂದು ನೆನಪಿಸಿಕೊಂಡರು.

ಮುಂದುವರಿದು ಮಾತನಾಡಿದ ಯಶ್, “ಸೀತಾ ಅಪಹರಣದಂತಹ ದೃಶ್ಯಗಳಲ್ಲಿ ಅಭಿಮಾನಿಗಳಿಗೂ ಇಂತಹ ಅನುಮಾನ ಬರಬಹುದು. ಆದರೆ ಕಥೆ ಕೇಳುವಾಗ ಪ್ರತಿಯೊಬ್ಬರೂ ಶ್ರೀರಾಮನ ತತ್ತ್ವಗಳನ್ನೇ ಅನುಸರಿಸಬೇಕು. ರಾವಣ ಎಷ್ಟೇ ಶಕ್ತಿಶಾಲಿಯಾಗಿ ಕಾಣಿಸಿದರೂ ಅಂತಿಮವಾಗಿ ಶ್ರೀರಾಮನ ತತ್ತ್ವಗಳೇ ಗೆಲ್ಲುವುದು. ಸಿನಿಮಾದಲ್ಲಿ ನೀನು ನನಗೆ ಬೆಂಬಲ ನೀಡಬಹುದು, ಆದರೆ ನೈಜ ಜೀವನದಲ್ಲಿ ಶ್ರೀರಾಮನೇ ಮಾದರಿ ಎಂದು ಮಗನಿಗೆ ತಿಳಿಸಿದೆ” ಎಂದಿದ್ದಾರೆ. ಮಗ ಬೆಳೆಯುತ್ತಿದ್ದಂತೆ ನೈಜ ಜೀವನ ಹಾಗೂ ಸಿನಿಮಾದ ಪಾತ್ರಕ್ಕೂ ಇರುವ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂಬ ಭರವಸೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.