SK Home Ad
Home ನಮ್ಮ ಜಿಲ್ಲೆ ಧಾರವಾಡ ಶಾಲಾ ಕಟ್ಟಡ ಮೇಲಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಶಾಲಾ ಕಟ್ಟಡ ಮೇಲಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

0
80

ಧಾರವಾಡ: ನವಲಗುಂದ ಪಟ್ಟಣದ ಬಸ್ತಿ ಪ್ಲಾಟ್‌ನಲ್ಲಿರುವ ಖಾಸಗಿ ವಿದ್ಯಾಜ್ಯೋತಿ ಪ್ರಾಥಮಿಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಶಾಲೆ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

ಮೂಲತಃ ತಾಲೂಕಿನ ಶಾನವಾಡ ಗ್ರಾಮದ ಆಕಾಶ ವಸಂತ ನೀಲಣ್ಣವರ (10) ಮೃತಪಟ್ಟ ವಿದ್ಯಾರ್ಥಿ. ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಹತ್ತು ದಿನಗಳ ಹಿಂದೆ ವಸತಿ ಶಾಲೆಗೆ ಆಕಾಶನನ್ನು ತಂದೆ ವಸಂತ ನೀಲಣ್ಣವರ ದಾಖಲಿಸಿದ್ದರು. ಗುರುವಾರ ಬೆಳಗ್ಗೆ ಆಕಾಶ ಶಾಲೆಯ ಕಂಪೌಂಡ್ ಮೇಲಿಂದ ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಶಾಲಾ ಸಿಬ್ಬಂದಿ ದಾಖಲಿಸಿದ್ದರು.

ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ವೈದ್ಯರು ರವಾನಿಸಿದ್ದು, ಕೆಎಂಸಿಆರ್‌ಐ ಆಸ್ಪತ್ರೆಗೆ ಬರುವಷ್ಟರಲ್ಲಿ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಕೆಎಂಸಿಆರ್‌ಐ ಎದುರು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪಿಎಸ್‌ಐ ಜನಾರ್ಧನ ಭಟ್ರಳ್ಳಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

ಇನ್ನೂ ಮಗುವಿನ ತಾಯಿ ದೀಪಾ ನೀಲಣ್ಣವರ ಮಾತನಾಡಿ, ಮಗ ಜಾಣ ಆಗಲಿ ಎಂದು ಹತ್ತು ದಿನಗಳ ಹಿಂದೆ ವಸತಿ ಶಾಲೆಗೆ ದಾಖಲಿಸಲಾಗಿತ್ತು. ಆದರೆ ಇಂದು ನಮ್ಮ ಮಗ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಮಗನನ್ನು ಕಳೆದುಕೊಂಡು ಸಂಕಟವಾಗುತ್ತಿದೆ. ಘಟನೆಯ ಬಗ್ಗೆ ಅದೇ ಶಾಲೆಯ ವಿದ್ಯಾರ್ಥಿಗಳನ್ನ ವಿಚಾರಸಬೇಕು. ಅಂದಾಗ ಸತ್ಯಾಸತ್ಯತೆ ತಿಳಿಯಲಿದೆ ಎಂದು ಕಣ್ಣೀರು ಹಾಕಿದರು.

ಸಾವಿನ ಸುತ್ತ ಅನುಮಾನದ ಹುತ್ತ: ಗುರುವಾರ ಬೆಳಗ್ಗೆ ಮಗ ಆಕಾಶ ಕಂಪೌಂಡ್ ಮೇಲಿಂದ ಬಿದ್ದಿದ್ದಾನೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಕಂಪೌಂಡ್ ಮೇಲಿಂದ ಬಿದ್ದು ಯಾರು ಸಾಯುವುದಿಲ್ಲ. ಕಂಪೌಂಡ್ ಮೇಲಿಂದ ಬಿದಿದ್ದಾನಾ ಅಥವಾ ಶಾಲಾ ಕಟ್ಟಡದ ಮೇಲಿಂದ ಬಿದ್ದಿದ್ದಾನೋ ಎಂಬ ಅನುಮಾನ ಕಾಡುತ್ತಿದೆ. ಶಾಲಾ ಸಿಬ್ಬಂದಿಯ ಹೊಡೆತ ತಪ್ಪಿಸಿಕೊಳ್ಳುವ ಭರದಲ್ಲಿ ಮಗು ಸಾವನ್ನಪ್ಪಿರಬಹದು. ಸಿಸಿಟಿವಿ ದೃಶ್ಯಾವಳಿ ಹಾಗೂ ಶಾಲಾ ಮಕ್ಕಳ ಹೇಳಿಕೆಯನ್ನು ಪಡೆದು ಪೊಲೀಸರು ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮೃತ ಬಾಲಕನ ತಂದೆ ವಸಂತ ನೀಲಣ್ಣವರ ಆಗ್ರಹಿಸಿದ್ದಾರೆ.