ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಸುನಾಮಿ ಏಳಲು ಸಿದ್ಧವಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಬಹುನಿರೀಕ್ಷಿತ ‘ಜೈಲರ್ 2’, ರಣಬೀರ್ ಕಪೂರ್-ಯಶ್ ಕಾಂಬಿನೇಷನ್‌ನ ‘ರಾಮಾಯಣ’ ಮತ್ತು ಸಿಂಬು ನಟನೆಯ ‘ಅರಸನ್’ ಚಿತ್ರಗಳು ಒಂದೇ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಪೈಪೋಟಿ ಏರ್ಪಡುವುದು ಖಚಿತವಾಗಿದೆ.
ಈ ಚಿತ್ರಗಳು ಆರಂಭದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರವನ್ನು ಈಗ ದೀಪಾವಳಿ ಹಬ್ಬದ ರೇಸ್‌ಗೆ ಮುನ್ನಡೆಸಲಾಗಿದೆ. ಮುತ್ತುವೇಲ್ ಪಾಂಡಿಯನ್ ಆಗಿ ರಜಿನಿ ಅಬ್ಬರಿಸಲಿರುವ ಈ ಸೀಕ್ವೆಲ್‌ನಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಹಾಗೂ ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಶೇಷವೆಂದರೆ, ಮೊದಲ ಭಾಗದ ಯಶಸ್ಸಿನ ಸೂತ್ರವಾಗಿದ್ದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಚಿತ್ರದಲ್ಲೂ ಅತಿಥಿ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಶನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಅಲ್ಲದೇ.. ಒಂದೆಡೆ ರಜನಿಕಾಂತ್ ಅಬ್ಬರವಾದರೆ, ಮತ್ತೊಂದೆಡೆ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ದೈತ್ಯ ಬಜೆಟ್‌ನ ‘ರಾಮಾಯಣ’ ಕಣದಲ್ಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಪೌರಾಣಿಕ ಚಿತ್ರ ದೀಪಾವಳಿಗೇ ಲಗ್ಗೆ ಇಡಲಿದೆ ಎನ್ನಲಾಗುತ್ತಿದೆ.
ಇದರೊಂದಿಗೆ, ವೆಟ್ರಿಮಾರನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿಂಬು ಅಭಿನಯದ ‘ಅರಸನ್’ ಚಿತ್ರವೂ ಇದೇ ರೇಸ್‌ನಲ್ಲಿದೆ. ಧನುಷ್ ನಟನೆಯ ಸೂಪರ್ ಹಿಟ್ ‘ವಡಾ ಚೆನ್ನೈ’ ಚಿತ್ರದ ಸ್ಪಿನ್ ಆಫ್ ಆಗಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಪ್ರತಿಭೆ ಚೈತ್ರಾ ಜೆ. ಆಚಾರ್ ಮತ್ತು ಪ್ರಿಯಾಂಕಾ ಮೋಹನ್ ನಾಯಕಿಯರಾಗಿದ್ದಾರೆ.
ಒಟ್ಟಾರೆ… ಈ ಮೂರು ಬಿಗ್ ಬಜೆಟ್ ಸಿನಿಮಾಗಳು ಏಕಕಾಲಕ್ಕೆ ಮುಖಾಮುಖಿಯಾಗುತ್ತಿರುವುದರಿಂದ ಚಿತ್ರಮಂದಿರಗಳ ಹಂಚಿಕೆ ಮತ್ತು ಗಳಿಕೆಯಲ್ಲಿ ತೀವ್ರ ಪೈಪೋಟಿ ಏರ್ಪಡಲಿದ್ದು, ಬಾಕ್ಸ್ ಆಫೀಸ್ ಧೂಳೀಪಟವಾಗುವುದಂತು ಗ್ಯಾರಂಟಿ ಎನ್ನಲಾಗುತ್ತಿದೆ.






















