ವಿಧಾನಸೌಧದಲ್ಲಿ ಪರಿಷತ್ ಚುನಾವಣೆ ಕಾವು, ಕಾಂಗ್ರೆಸ್‌ಗೆ 4, ಬಿಜೆಪಿಗೆ 2 ಸ್ಥಾನ ಬಹುತೇಕ ಖಚಿತ – 7ನೇ ಸ್ಥಾನಕ್ಕೆ ಜಟಾಪಟಿ, ವಿನಯ್ ಕಾರ್ತಿಕ್-ಗೋವಿಂದರಾಜು ನಡುವೆ ನೇರ ಹಣಾಹಣಿ
ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಏಳನೇ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ವಿಧಾನಸೌಧದಲ್ಲಿ ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಬಳಿಕ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.
ಈ ಬಾರಿ ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಇಬ್ಬರು ಹಾಗೂ ಜೆಡಿಎಸ್ ಒಬ್ಬ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿದೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವೆಂದು ರಾಜಕೀಯ ವಲಯದಲ್ಲಿ ಅಂದಾಜಿಸಲಾಗಿದೆ. ಆದರೆ ಉಳಿದ ಏಳನೇ ಸ್ಥಾನಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಡುವೆ ನೇರ ಪೈಪೋಟಿ ನಿರ್ಮಾಣವಾಗಿದೆ.
ಇದನ್ನೂ ಓದಿ: ರೈಲ್ವೆ ಹುದ್ದೆ ಬಡ್ತಿ ಪರೀಕ್ಷೆ: ಕನ್ನಡದಲ್ಲಿ ಬರೆಯಲು ಮತ್ತೆ ನಿರಾಕರಣೆ
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ ಪರವಾಗಿ ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಶಿವಣ್ಣ ಬಿ.ಎಸ್., ಬಿ.ಕೆ. ಹರಿಪ್ರಸಾದ್ ಹಾಗೂ ವಿನಯ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ರಘು ಆರ್. ಮತ್ತು ಲಿಂಗರಾಜ ಪಾಟೀಲ್ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪಕ್ಷವು ಗೋವಿಂದರಾಜು ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಗೆಲುವಿಗೆ 28 ಮತಗಳ ಕೋಟಾ : ವಿಧಾನ ಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಕೋಟಾ ನಿಗದಿಯಾಗಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದು, ಬಿಜೆಪಿ 62 ಮತ್ತು ಜೆಡಿಎಸ್ 18 ಶಾಸಕರ ಬಲ ಹೊಂದಿವೆ. ಇದರ ಹೊರತಾಗಿ ಮೂರು ಪಕ್ಷೇತರ ಶಾಸಕರು, ಬಿಜೆಪಿ ಉಚ್ಚಾಟಿತ ಮೂವರು ಶಾಸಕರು ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಅವರ ಮತಗಳು ಮಹತ್ವ ಪಡೆದುಕೊಂಡಿವೆ.
ಇದನ್ನೂ ಓದಿ: ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ
ರಾಜಕೀಯ ಲೆಕ್ಕಾಚಾರದ ಪ್ರಕಾರ ಪಕ್ಷೇತರ ಶಾಸಕರು ಹಾಗೂ ಉಚ್ಚಾಟಿತ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಜನಾರ್ದನ ರೆಡ್ಡಿ ಬಿಜೆಪಿ ಜೊತೆ ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ಅವರು ಕೂಡ ಎನ್‌ಡಿಎ ಅಭ್ಯರ್ಥಿಗಳ ಪರ ಮತ ಚಲಾಯಿಸುವ ಸಾಧ್ಯತೆ ಇದೆ.
ಎಲ್ಲರ ಗಮನ 7ನೇ ಸ್ಥಾನದತ್ತ : ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಹಾಗೂ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಹೀಗಾಗಿ ಏಳನೇ ಸ್ಥಾನವೇ ಈ ಚುನಾವಣೆಯ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ: 232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ
ವಿನಯ್ ಕಾರ್ತಿಕ್ ಹಾಗೂ ಗೋವಿಂದರಾಜು ಇಬ್ಬರಿಗೂ ಗೆಲುವಿನ ಕೋಟಾ ತಲುಪಲು ಹೆಚ್ಚುವರಿ ಮತಗಳ ಅಗತ್ಯವಿರುವ ಕಾರಣ ಎರಡೂ ಪಕ್ಷಗಳು ಎರಡನೇ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರಕ್ಕೆ ಹೆಚ್ಚಿನ ಒತ್ತು ನೀಡಿವೆ. ತಮ್ಮ ಅಭ್ಯರ್ಥಿಗಳಿಗೆ ಹೇಗೆ ಮತ ಚಲಾಯಿಸಬೇಕು ಎಂಬ ಕುರಿತು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈಗಾಗಲೇ ತಮ್ಮ ಶಾಸಕರಿಗೆ ಶಾಸಕಾಂಗ ಸಭೆಗಳಲ್ಲಿ ಸೂಚನೆ ನೀಡಿವೆ.
ಅಡ್ಡ ಮತದಾನವಾಗುತ್ತದೆಯೇ? : ಏಳನೇ ಸ್ಥಾನಕ್ಕೆ ಅಗತ್ಯ ಸಂಖ್ಯಾಬಲ ಯಾವುದೇ ಪಕ್ಷದ ಬಳಿ ನೇರವಾಗಿ ಇಲ್ಲದಿರುವ ಕಾರಣ ಅಡ್ಡ ಮತದಾನ ನಡೆಯುವ ಸಾಧ್ಯತೆಗಳ ಕುರಿತೂ ಚರ್ಚೆಗಳು ಜೋರಾಗಿವೆ. ಕೆಲ ಶಾಸಕರು ಗೈರಾಗುವ ಸಾಧ್ಯತೆ ಇದೆಯೇ ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಚ್ಚರಿ ಬೆಳವಣಿಗೆಗಳು ನಡೆಯುತ್ತವೆಯೇ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ: ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ
ರೆಸಾರ್ಟ್ ರಾಜಕಾರಣದ ನಡುವೆಯೇ ಮತದಾನ: ಚುನಾವಣೆಗೆ ಮುನ್ನ ಶಾಸಕರನ್ನು ಒಗ್ಗೂಡಿಸಿ ಕಾಯ್ದುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಶಾಸಕರನ್ನು ವಂಡರ್ ಲಾ ಸಮೀಪದ ರೆಸಾರ್ಟ್‌ನಲ್ಲಿ ಇರಿಸಿತ್ತು. ಅಲ್ಲಿಂದ ನೇರವಾಗಿ ಬಸ್ ಮೂಲಕ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಸಂಜೆ ಹೊರಬೀಳಲಿದೆ ಫಲಿತಾಂಶ : ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಆರಂಭವಾಗಲಿದೆ. ಸಂಜೆ ಸುಮಾರು 6 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದ್ದು, ಏಳನೇ ಸ್ಥಾನವನ್ನು ಕಾಂಗ್ರೆಸ್ ತನ್ನದಾಗಿಸಿ ಕೊಳ್ಳುತ್ತದೆಯೇ ಅಥವಾ ಜೆಡಿಎಸ್ ಅಚ್ಚರಿ ಫಲಿತಾಂಶ ದಾಖಲಿಸುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯ ರಾಜಕೀಯದ ದೃಷ್ಟಿಯಿಂದ ಈ ಫಲಿತಾಂಶ ಮಹತ್ವ ಪಡೆದುಕೊಂಡಿದೆ.





















