SK Home Ad
Home ನಮ್ಮ ಜಿಲ್ಲೆ ಕಲಬುರಗಿ ರೈತರಿಗೆ ಗೊಬ್ಬರ ಸಿಗದಿದ್ದರೆ ಅದರ ಹಿಂದೆ ಹಗರಣದ ವಾಸನೆ

ರೈತರಿಗೆ ಗೊಬ್ಬರ ಸಿಗದಿದ್ದರೆ ಅದರ ಹಿಂದೆ ಹಗರಣದ ವಾಸನೆ

0
98
File Photo

ಗೊಬ್ಬರ ಕೊರತೆ ಇಲ್ಲ, ವಿತರಣೆಯಲ್ಲಿ ಸರ್ಕಾರ ವಿಫಲ – ಅಂಕಿ-ಅಂಶಗಳೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ರಾಜಕುಮಾರ ಪಾಟೀಲ್ ತೆಲ್ಕೂರ್ ವಾಗ್ದಾಳಿ

ಸಂ.ಕ. ಸಮಾಚಾರ ಕಲಬುರಗಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂಬ ಭಾವನೆ ಮೂಡಿಸಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಿದ್ದರೂ, ಅದನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿದ್ದ ಪಿಐಎಲ್ ವಜಾ: ಅರ್ಜಿದಾರರಿಗೆ ದಂಡ

ಜನವರಿಯಿಂದ ಮಾರ್ಚ್ ಅವಧಿಯಲ್ಲಿ ರಾಜ್ಯದ ಬೇಡಿಕೆಯನ್ನು ಮೀರಿಸಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ (DAP) ಹಾಗೂ 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ (NPKS) ರಸಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದೆ ಎಂದು ಅವರು ಮಾಹಿತಿ ನೀಡಿದರು.

ಜೂನ್ 10ರವರೆಗೆ ರಾಜ್ಯಕ್ಕೆ 3.13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೂ 5.59 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಖಚಿತಪಡಿಸಲಾಗಿದೆ. ಅದೇ ರೀತಿ 1.89 ಲಕ್ಷ ಮೆಟ್ರಿಕ್ ಟನ್ ಡಿಎಪಿ ಅಗತ್ಯವಿದ್ದರೆ 2.57 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಒದಗಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1.09 ಲಕ್ಷ ಮೆಟ್ರಿಕ್ ಟನ್ ಡಿಎಪಿ ದಾಸ್ತಾನು ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೆಮ್ಮಿನ ಸಿರಪ್ ಮೇಲೆ ಕೇಂದ್ರದ ಕಟ್ಟುನಿಟ್ಟಿನ ಕ್ರಮ: ಸಾರ್ವಜನಿಕರಿಗೆ ಏನು ಬದಲಾವಣೆ?

ಇನ್ನು ಎನ್‌ಪಿಕೆಎಸ್ ರಸಗೊಬ್ಬರದ ಬೇಡಿಕೆ 4.36 ಲಕ್ಷ ಮೆಟ್ರಿಕ್ ಟನ್ ಇದ್ದರೆ, 9.28 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಖಚಿತಪಡಿಸಲಾಗಿದೆ. ಗಣನೀಯ ಪ್ರಮಾಣದಲ್ಲಿ ಮಾರಾಟವಾದ ಬಳಿಕವೂ ರಾಜ್ಯದಲ್ಲಿ 5.6 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ರಸಗೊಬ್ಬರ ದಾಸ್ತಾನು ಉಳಿದಿದೆ ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿದರು.

ರಾಜ್ಯ ಸರ್ಕಾರ ಜಿಲ್ಲೆಗಳ ನಡುವೆ ಸಮರ್ಪಕ ವಿತರಣೆ ವ್ಯವಸ್ಥೆ ರೂಪಿಸದಿರುವುದೇ ರೈತರಿಗೆ ಗೊಬ್ಬರ ಕೊರತೆಯ ಅನುಭವವಾಗಲು ಪ್ರಮುಖ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಸೇಡಂ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ರಸಗೊಬ್ಬರ ದಾಸ್ತಾನು ದಂಧೆ ಮತ್ತು ಕಾಳಸಂತೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಇದನ್ನೂ ಓದಿ: NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ

“ರಸಗೊಬ್ಬರ ರಾಜ್ಯದಲ್ಲಿ ಲಭ್ಯವಿದ್ದರೂ ರೈತರಿಗೆ ಸಿಗುತ್ತಿಲ್ಲ ಎಂದರೆ ಅದರ ಹಿಂದೆ ದೊಡ್ಡ ಮಟ್ಟದ ಅಕ್ರಮ ಅಥವಾ ಹಗರಣದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ರಾಜಕುಮಾರ ಪಾಟೀಲ್ ತೆಲ್ಕೂರ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ತಕ್ಷಣವೇ ಜಿಲ್ಲಾವಾರು ರಸಗೊಬ್ಬರ ದಾಸ್ತಾನು ಮತ್ತು ವಿತರಣೆಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ಜೊತೆಗೆ ಕಾಳಸಂತೆಕೋರರು ಹಾಗೂ ಅಕ್ರಮ ದಾಸ್ತಾನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತ ಶಾಕ್: ಮಾಜಿ ಕಚೇರಿ ಅಧೀಕ್ಷಕ ಮನೆ ಸೇರಿ 5 ಕಡೆ ದಾಳಿ

ಅಧಿಕೃತ ದಾಖಲೆಗಳ ಪ್ರಕಾರ 2026ರ ಜೂನ್ 12ರ ವೇಳೆಗೆ ರಾಜ್ಯದಲ್ಲಿ 3.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.05 ಲಕ್ಷ ಮೆಟ್ರಿಕ್ ಟನ್ ಡಿಎಪಿ ಸೇರಿದಂತೆ ಒಟ್ಟು 10.60 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಒದಗಿಸಿದ್ದರೂ, ರೈತರ ಕೈಗೆ ಅದು ತಲುಪದಿರುವುದು ರಾಜ್ಯ ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಅವರು ಕಿಡಿಕಾರಿದರು.