SK Home Ad
Home ಸುದ್ದಿ ರಾಜ್ಯ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯನಗರದಲ್ಲಿ ಲೋಕಾಯುಕ್ತ ದಾಳಿ

ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯನಗರದಲ್ಲಿ ಲೋಕಾಯುಕ್ತ ದಾಳಿ

0
127

ಆದಾಯ ಮೀರಿ ಆಸ್ತಿ ಆರೋಪ: ಮೂವರು ಅಧಿಕಾರಿಗಳ 18 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ, ₹40 ಲಕ್ಷ ನಗದು ಪತ್ತೆ

ದಾವಣಗೆರೆ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ರಾಜ್ಯದ ವಿವಿಧೆಡೆ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಹಾಗೂ ಇತರ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 18 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆಗಳು, ಬ್ಯಾಂಕ್ ವ್ಯವಹಾರಗಳ ವಿವರಗಳು, ಸ್ಥಿರ ಹಾಗೂ ಚರಾಸ್ತಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ದಾಳಿಗೆ ಒಳಗಾದ ಅಧಿಕಾರಿಗಳಲ್ಲಿ ಚಿತ್ರದುರ್ಗದ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣಾ ನಾಯ್ಕ್, ಹುಬ್ಬಳ್ಳಿಯ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ (ಮೆಕ್ಯಾನಿಕಲ್) ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಹಾಗೂ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಸೇರಿದ್ದಾರೆ.

ಕೃಷ್ಣಾ ನಾಯ್ಕ್ ಅವರಿಗೆ ಸಂಬಂಧಿಸಿದಂತೆ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಎರಡು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಸಿದ್ದೇಶ್ವರ ಹೆಬ್ಬಾಳ್ ಅವರ ಆಂಜನೇಯ ಬಡಾವಣೆಯಲ್ಲಿರುವ ನಿವಾಸ ಹಾಗೂ ಇತರ ಆಸ್ತಿಗಳ ಮೇಲೂ ಶೋಧ ಕಾರ್ಯ ನಡೆದಿದೆ. ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆ ಮತ್ತು ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಇದಲ್ಲದೆ ದಾವಣಗೆರೆಯ ಶಿವಕುಮಾರ್ ಬಡಾವಣೆಯ ಮನೆ, ಹರಪನಹಳ್ಳಿಯಲ್ಲಿರುವ ಮತ್ತೊಂದು ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ. ಪ್ರತ್ಯೇಕ ತಂಡಗಳನ್ನು ರಚಿಸಿ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ಆಸ್ತಿ ಸಂಪಾದನೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ದಾಳಿಯ ವೇಳೆ ಅಧಿಕಾರಿಗಳ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಸ್ಥಿರ-ಚರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಹುಬ್ಬಳ್ಳಿಯ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ನಿವಾಸದಲ್ಲಿ ಶೋಧ ನಡೆಸಿದ ವೇಳೆ ಸುಮಾರು ₹40 ಲಕ್ಷ ನಗದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ, ದಾಳಿ ವೇಳೆ ದೊರೆತ ದಾಖಲೆಗಳು ಹಾಗೂ ಆಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆ ಮುಂದುವರಿದಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಈ ಕಾರ್ಯಾಚರಣೆ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದ್ದು, ಸರ್ಕಾರಿ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.