ಬೆಳಗಾವಿ: ಪತಿಯ ಹೆಸರಿನಲ್ಲಿರುವ 2 ಕೋಟಿ ವಿಮಾ ಹಣ ಹಾಗೂ ಪ್ರಿಯಕರನೊಂದಿಗೆ ಜಾಲಿ ಲೈಫ್ ಆಸೆಗೆ ಸಲೈನ್‌ನಲ್ಲಿ ಕೀಟನಾಶಕ ಸೇರಿಸಿ ಕೊಟ್ಟು ಮಾಜಿ ಸೈನಿಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿ ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯೋಧನ ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ ಕೃತ್ಯಕ್ಕೆ ಸಾಥ್ ಕೊಟ್ಟ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ, ನಾಗರಾಜು, ಅಶೋಕ ಗುಜನಾಳ, ಬಸವರಾಜ್ ಬಸ್ಮೆ, ರಾಹುಲ್ ಜೋಗಿ ಎಂಬುವರನ್ನು ಬಂಧಿಸಲಾಗಿದೆ.
ಘಟನೆ ಏನು: ಲಕ್ಷ್ಮೀ ಜಾತ್ರೆಗೆ ಎಂದು ಬೈಕಿನಲ್ಲಿ ತೆರಳಿದ್ದ ಮಾಜಿ ಸೈನಿಕ ಸಂದೀಪ ಮಂಜರಿ (46) ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಘಟಪ್ರಭಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಪತಿ ಚೇತರಿಸಿಕೊಳ್ಳುತ್ತಿರುವುದನ್ನು ಕಂಡು ಪತ್ನಿ ಸುಮಾ ಆತನ ಕೊಲೆಗೆ ಸ್ಕೆಚ್ ರೂಪಿಸಿದ್ದಳು.
ಸಂದೀಪ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ವಿಮೆ ಮಾಡಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮರಣ ಹೊಂದಿದರೆ ಸುಮಾರು 2 ಕೋಟಿ ರೂ. ವಿಮಾ ಹಣ ಬರುತ್ತದೆ ಎಂಬ ದುರಾಸೆಯಿಂದ ಆರೋಪಿ ಪುಂಡಲೀಕ ವಿಠಲ ಡೊಂಬರ ಸೇರಿ, ಸಲೈನ್ ಬಾಟಲ್‌ನಲ್ಲಿ ವಿಷ ಬೆರೆಸಿ ಹಾಗೂ ನಿದ್ದೆ ಮಾತ್ರೆ ಸೇವಿಸಲು ನೀಡಿ ಸಂದೀಪ ಅವರನ್ನು ಹತ್ಯೆ ಮಾಡಿದ್ದರು. ನಂತರ ಇದೊಂದು ರಸ್ತೆ ಅಪಘಾತವೆಂದು ಬಿಂಬಿಸಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಮುಚ್ಚಿಹಾಕಲು ಮತ್ತು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಷದ ಅಂಶ ಕಂಡುಬರದಂತೆ ಮಾಡಲು, ಬೆಳಗಾವಿಯ ಆರ್‌ಎಫ್‌ಎಸ್‌ಎಲ್ ಪ್ರಯೋಗಾಲಯದ ಸಿಬ್ಬಂದಿ ಹಾಗೂ ವೈದ್ಯರು ಸೇರಿದಂತೆ ಹಲವರನ್ನು ಬಳಸಿಕೊಂಡಿದ್ದರು.
ದೂರಿನಂತೆ ಮೃತದೇಹವನ್ನು ಉಪವಿಭಾಗಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ಹೂತಿದ್ದ ಸ್ಥಳದಿಂದ ಹೊರತೆಗೆದು ಪುನಃ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ವಿಷಪ್ರಾಶನ ಕಾರಣ ಎಂಬುದು ಗೊತ್ತಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ ವಿಷದ ಬಾಟಲಿಗಳು, ಸಿರಿಂಜ್, ಮೊಬೈಲ್ ಮತ್ತು ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.





















