ನವದೆಹಲಿ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು (ರಾಷ್ಟ್ರೀಯ ಸಂಗೀತ, ನೃತ್ಯ ಮತ್ತು ನಾಟಕ ಅಕಾಡೆಮಿ) 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಫೆಲೋಶಿಪ್ (ಅಕಾಡೆಮಿ ರತ್ನ), ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (ಅಕಾಡೆಮಿ ಪುರಸ್ಕಾರ) ಹಾಗೂ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರಕಟಿಸಿದೆ.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಅಕಾಡೆಮಿಯ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 7 ಪ್ರಮುಖ ಸಾಧಕರನ್ನು ಸರ್ವಾನುಮತದಿಂದ ಅಕಾಡೆಮಿ ಫೆಲೋಶಿಪ್‌ಗೆ (ಅಕಾಡೆಮಿ ರತ್ನ) ಆಯ್ಕೆ ಮಾಡಲಾಗಿದೆ.
ಕರ್ನಾಟಕದ ಸಾಧಕರಿಗೆ ಒಲಿದ ಪ್ರಶಸ್ತಿ: ಸಂಗೀತ, ನೃತ್ಯ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ದೇಶದಾದ್ಯಂತ ಹಲವು ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕದ ಸಾಧಕರೂ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಹೆಸರಾಂತ ವಿದ್ವಾಂಸರಾದ ಎ.ವಿ. ಆನಂದ್ ಅವರು ಅತ್ಯುನ್ನತ ‘ಅಕಾಡೆಮಿ ರತ್ನ’ (ಫೆಲೋ) ಗೌರವಕ್ಕೆ ಪಾತ್ರರಾಗಿದ್ದಾರೆ. ಉಳಿದಂತೆ ಕರ್ನಾಟಕದ ತರಬೇತಿ ಮತ್ತು ಜಾನಪದ ಸಂಗೀತ ವಿಭಾಗದಲ್ಲಿ ಎಸ್.ಸಿ. ಶರ್ಮಾ ಅವರು 2024ರ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯುವ ಪುರಸ್ಕಾರ ವಿಭಾಗದಲ್ಲೂ ರಾಜ್ಯದ ಪ್ರತಿಭೆಗಳು ಗುರುತಿಸಲ್ಪಟ್ಟಿದ್ದಾರೆ.
ಅಕಾಡೆಮಿ ಫೆಲೋಶಿಪ್ (ಅಕಾಡೆಮಿ ರತ್ನ): ಒಟ್ಟು 7 ಜನ ಸಾಧಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ರಾಮಲಾಲ್ ಬರೇತ್, ಎ.ವಿ. ಆನಂದ್, ರೀಟಾ ಗಂಗೂಲಿ, ಪುರು ದಧೀಚ್, ಚಿತ್ತರಂಜನ್ ಜ್ಯೋತಿಷಿ, ಪಸುಮರ್ತಿ ರತ್ತಯ್ಯ ಶರ್ಮಾ ಮತ್ತು ಸುಧಾರಾಣಿ ರಘುಪತಿ ಸೇರಿದ್ದಾರೆ.
ಅಕಾಡೆಮಿ ಪ್ರಶಸ್ತಿ (ಅಕಾಡೆಮಿ ಪುರಸ್ಕಾರ): 2024 ಮತ್ತು 2025ರ ಸಾಲಿಗೆ ಒಟ್ಟು 108 ಹಿರಿಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ: ತರುಣ ಕಲಾವಿದರನ್ನು ಪ್ರೋತ್ಸಾಹಿಸುವ ಈ ವಿಭಾಗದಲ್ಲಿ 2024 ಮತ್ತು 2025ರ ಸಾಲಿಗೆ ಒಟ್ಟು 106 ಯುವ ಪ್ರತಿಭೆಗಳನ್ನು ಗುರುತಿಸಲಾಗಿದೆ.
ದೇಶದ ವೈವಿಧ್ಯಮಯ ಕಲೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಪ್ರಶಸ್ತಿಗಳಲ್ಲಿ ಅತ್ಯುನ್ನತ ಫೆಲೋಶಿಪ್ ಹಾಗೂ ಅಕಾಡೆಮಿ ಪ್ರಶಸ್ತಿಗಳನ್ನು ಮಾನ್ಯ ಭಾರತದ ರಾಷ್ಟ್ರಪತಿಗಳು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ. ಯುವ ಪುರಸ್ಕಾರಗಳನ್ನು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ಪ್ರತ್ಯೇಕ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಿದ್ದಾರೆ ಎಂದು ಅಕಾಡೆಮಿಯ ಕಾರ್ಯದರ್ಶಿ ರಾಜು ದಾಸ್ ತಿಳಿಸಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ಪ್ರಶಸ್ತಿ ಪಡೆದಿರುವ ಕರ್ನಾಟಕದ ಸಾಧಕರು
ಅಕಾಡೆಮಿ ಫೆಲೋಶಿಪ್ (ಅಕಾಡೆಮಿ ರತ್ನ):
ಎ.ವಿ. ಆನಂದ್: ಮೃದಂಗ ವಾದನ ಕ್ಷೇತ್ರದಲ್ಲಿನ ಇವರ ಅಪಾರ ಸಾಧನೆಗಾಗಿ ಅಕಾಡೆಮಿಯ ಅತ್ಯುನ್ನತ ‘ಅಕಾಡೆಮಿ ರತ್ನ’ ಗೌರವವನ್ನು ನೀಡಿ ಗೌರವಿಸಲಾಗಿದೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2024ನೇ ಸಾಲು)
ಕೆ. ವಾಗೀಶ್: ಕರ್ನಾಟಕ ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ) ವಿಭಾಗ
ಕೆರೆಮನೆ ಶಿವಾನಂದ ಹೆಗಡೆ: ಯಕ್ಷಗಾನ ಕ್ಷೇತ್ರ (ಇತರ ಪ್ರಮುಖ ನೃತ್ಯ ಪ್ರಕಾರಗಳು ಮತ್ತು ನೃತ್ಯ ನಾಟಕ ವಿಭಾಗ)
ಟಿ.ಎಸ್. ನಾಗಾಭರಣ: ರಂಗಭೂಮಿ ನಿರ್ದೇಶನ ವಿಭಾಗ
ಎಸ್.ಸಿ. ಶರ್ಮಾ: ಜಾನಪದ ಸಂಗೀತ ವಿಭಾಗ
ಟಿ.ಎಸ್. ಸತ್ಯವತಿ: ಸಂಗೀತ ಕ್ಷೇತ್ರಕ್ಕೆ ನೀಡಿದ ಒಟ್ಟಾರೆ ಕೊಡುಗೆ ವಿಭಾಗ
ವೀಣಾ ಮೂರ್ತಿ ವಿಜಯ್: ಕುಚಿಪುಡಿ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2025ನೇ ಸಾಲು)
ಅನೂರು ಆರ್. ಅನಂತಕೃಷ್ಣ ಶರ್ಮಾ: ಕರ್ನಾಟಕ ಶಾಸ್ತ್ರೀಯ ಸಂಗೀತ (ಮೃದಂಗ ವಾದನ) ವಿಭಾಗ
ಜ್ಯೋತಿ ಹೆಗಡೆ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ (ರುದ್ರವೀಣೆ)
ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ (2024ನೇ ಸಾಲು)
ಶಿಲ್ಪಾ ನಂಜಪ್ಪ: ಭರತನಾಟ್ಯ ಪ್ರದರ್ಶನ ಕಲಾ ವಿಭಾಗದಲ್ಲಿ ಒಟ್ಟಾರೆ ಕೊಡುಗೆಗಾಗಿ ಯುವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಮಹಾಲಕ್ಷ್ಮೀ ಶೆಣೈ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ (ಗಾಯನ)
ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ (2025ನೇ ಸಾಲು)
ರಂಜನಿ ವಾಸುಕಿ: ಕರ್ನಾಟಕ ಶಾಸ್ತ್ರೀಯ ಸಂಗೀತ (ಗಾಯನ)




















