SK Home Ad
Home ಸುದ್ದಿ ದೇಶ ಪ್ರತಿಭಟನೆ ಹಕ್ಕು ಕಸಿಯುವಂತಿಲ್ಲ: ಅತಿರೇಕದ ವಿರುದ್ಧ ಸುಪ್ರೀಂ ಗರಂ!

ಪ್ರತಿಭಟನೆ ಹಕ್ಕು ಕಸಿಯುವಂತಿಲ್ಲ: ಅತಿರೇಕದ ವಿರುದ್ಧ ಸುಪ್ರೀಂ ಗರಂ!

0
88

ನೀಟ್‌ ಪ್ರತಿಭಟನೆ ಪ್ರಕರಣ: ಅಖಿಲ ಭಾರತ ಪ್ರತಿಭಟನೆ ನೀತಿ ರೂಪಿಸಲು ಸುಪ್ರೀಂ ಕೋರ್ಟ್ ಪರಿಗಣನೆ

ನವದೆಹಲಿ: ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ, ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ಸುಸೂತ್ರವಾಗಿ ನಡೆಸಲು ಏಕರೂಪ ಶಿಷ್ಟಾಚಾರ ಹಾಗೂ ಕಡ್ಡಾಯ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಪರಿಗಣಿಸುವುದಾಗಿ ನ್ಯಾಯಾಲಯ ಸೋಮವಾರ ತಿಳಿಸಿದೆ.

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಶ್ರುವಾಯು ಪ್ರಯೋಗ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯಗಳನ್ನು ದಾಖಲಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರೊಂದಿಗೆ ವಿಚಾರಣೆ ನಡೆಸಿತು. ಪ್ರತಿಭಟನೆ ನಡೆಸುವವರಿಗೆ ಸೂಕ್ತ ಸ್ಥಳ ಹಾಗೂ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಆಡಳಿತದ ಮೇಲಿದೆ. ಅದೇ ವೇಳೆ, ಪ್ರತಿಭಟನೆ ಹೆಸರಿನಲ್ಲಿ ಸಮಾಜವಿರೋಧಿ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವ ಅವಕಾಶವೂ ಇರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣನ್, ಕಾಲಿನ್ ಗೊನ್ಸಾಲ್ವೆಸ್ ಹಾಗೂ ವಿಕಾಸ್ ಸಿಂಗ್ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಪ್ರಶ್ನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮತ್ತೊಂದೆಡೆ, ಪ್ರತಿಭಟನೆ ಸಂದರ್ಭ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳ ಮೇಲೆಯೂ ಹಲ್ಲೆಗಳು ನಡೆದಿರುವ ಕುರಿತು ಸಲ್ಲಿಸಲಾದ ಅರ್ಜಿಯನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯ, ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಗಳೂ ಅಷ್ಟೇ ಗಂಭೀರ ವಿಷಯವಾಗಿದ್ದು, ಅವರಿಗೆ ಸಮರ್ಪಕ ಭದ್ರತೆ ಒದಗಿಸಲಾಗಿದೆಯೇ ಎಂಬುದರ ಕುರಿತು ರಾಜ್ಯ ಸರ್ಕಾರದಿಂದ ಉತ್ತರ ಕೇಳಬಹುದಾಗಿದೆ ಎಂದು ತಿಳಿಸಿತು.

ಶಾಂತಿಯುತ ಪ್ರತಿಭಟನೆಯ ಹಕ್ಕು ಸಂವಿಧಾನದಿಂದ ರಕ್ಷಿಸಲ್ಪಟ್ಟಿರುವುದರಿಂದ ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, “ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಪೊಲೀಸರ ಅತಿರೇಕವನ್ನು ಸಮರ್ಥಿಸಲಾಗದು” ಎಂದು ಕಟುವಾಗಿ ಹೇಳಿದೆ.

ಈ ಪ್ರಕರಣದ ಹೆಚ್ಚಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿರುವ ನ್ಯಾಯಾಲಯ, ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳಿಗೆ ಏಕರೂಪ ಶಿಷ್ಟಾಚಾರ ಮತ್ತು ಕಡ್ಡಾಯ ಮಾರ್ಗಸೂಚಿಗಳ ಅಗತ್ಯದ ಬಗ್ಗೆ ಮುಂದಿನ ಹಂತದಲ್ಲಿ ವಿಸ್ತೃತ ಚರ್ಚೆ ನಡೆಸುವ ಸಾಧ್ಯತೆ ಇದೆ.