SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು

ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು

0
940

ಕೊಪ್ಪಳ(ಗಂಗಾವತಿ): ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕ ತಂದೆ-ತಾಯಿ ಹಾಗೂ ಅಕ್ಕನಿಗೆ ಚಾಕು ಇರಿದ್ದಿದ್ದು, ನಂತರ ತಾನೂ ಚಾಕುವಿನಿಂದ ಚುಚ್ಚಿಕೊಂಡ ಘಟನೆ ಗಂಗಾವತಿ ತಾಲೂಕಿನ ಅಯೋಧ್ಯಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಚಾಕು ಬಲವಾಗಿ ಇರಿದಿದ್ದಕ್ಕೆ ಆತನ ಸಹೋದರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ತಂದೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗ ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ.

ತಂದೆ ವೆಂಕಟ ನಾಯ್ಡು (45) ಹಾಗೂ ಸಹೋದರಿ ಪ್ರಗತಿ (19) ಮೃತಪಟ್ಟವರು. ತಾಯಿ ಸೌಜನ್ಯ ಹಾಗೂ ಸಾಯಿವೆಂಕಟ (ಮಣಿದೀಪ) ನಾಯ್ಡು(18) ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ತಂದೆ ವೆಂಕಟ ನಾಯ್ಡು ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು. ವೆಂಕಟ ನಾಯ್ಡು, ಪತ್ನಿ, ಇಬ್ಬರು ಮಕ್ಕಳು ಮತ್ತು ಅವರ ತಂದೆ-ತಾಯಿ ಸೇರಿ ಶನಿವಾರ ರಾತ್ರಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಬಳಿಕ ವೆಂಕಟ ನಾಯ್ಡು ಪತ್ನಿ ಹಾಗೂ ಮಕ್ಕಳೊಂದಿಗೆ ಒಂದು ಕೊಠಡಿಯಲ್ಲಿ ಮಲಗಲು ಹೋಗಿದ್ದಾರೆ. ಹಾಗೂ ಅವರ ಪೋಷಕರು ಒಂದು ಕೊಠಡಿಯಲ್ಲಿ ಮಲಗಿದ್ದಾರೆ.

ವೆಂಕಟ ನಾಯ್ಡು ಕೊಠಡಿಯಿಂದ ಗಲಾಟೆ ಸುದ್ದಿ ಕೇಳಿದೆ. ಬಾಗಿಲು ತೆರೆಯಿರಿ ಎಂದು ವೆಂಕಟ ನಾಯ್ಡು ಕಿರಿಚಿದ್ದಾರೆ. ಆಗ ವೆಂಕಟ ನಾಯ್ಡು ಅವರ ತಂದೆ ತಾತಾರಾವ್ ರೂಂ ಬಾಗಿಲು ತೆಗೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ನಂತರ ನೆರೆಯವರ ಸಹಾಯದಿಂದ ಬಾಗಿಲು ಮುರಿದ್ದಾರೆ. ಆಗ ಮಗ, ಸೊಸೆ ಹಾಗೂ ಮೊಮ್ಮಗಳು ರಕ್ತದ ಮುಡುವಿನಲ್ಲಿ ಬಿದ್ದಿದ್ದು ಕಂಡಿದ್ದಾರೆ.

ಮೊಮ್ಮಗ ಸಾಯಿವೆಂಕಟ (ಮಣಿದೀಪ) ರಾತ್ರಿ ಏಕಾಏಕಿ ಸಿಟ್ಟಿಗೆ ಬಂದು ಮಗ, ಸೊಸೆ, ಮೊಮ್ಮಗಳಿಗೆ ಚಾಕು ಹಾಕಿ, ತಾನೂ ಚಾಕು ಇರಿದುಕೊಂಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾತಾರಾವ್ ನೀಡಿದ ದೂರಿನ ಅನ್ವಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ, ಚಾಕು ಇರಿದ ಯುವಕ ಸಾಯಿ ವೆಂಕಟ (ಮಣಿದೀಪ) ನಾಯ್ಡು ಆನ್‌ಲೈನ್ ಗೇಮ್ ವ್ಯಸನಕ್ಕೆ ಬಲಿಯಾಗಿದ್ದ. ಕುಟುಂಬದವರು ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಕುಪಿತನಾಗಿ ತಂದೆ, ತಾಯಿ, ಅಕ್ಕನಿಗೆ ಚಾಕು ಇರಿದು ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಯುವಕನ ತಾತ ದೂರು ನೀಡಿದ್ದಾರೆ ಎಂದು ತಿಳಿಸಿದರು.