ವಿಜಯಪುರದಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಗೆ ಭವ್ಯ ಚಾಲನೆ
ವಿಜಯಪುರ: ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ವಿಜಯಪುರ ನಗರ ಇಂದು ಸಾಕ್ಷಿಯಾಗಿದ್ದು, ನಗರದ BLDE ಒಳಾಂಗಣ ಕ್ರೀಡಾಂಗಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡೋತ್ಸವಕ್ಕೆ ಸಚಿವ ಎಂ.ಬಿ. ಪಾಟೀಲ್ ಭವ್ಯ ಚಾಲನೆ ನೀಡಿದರು.
ಇಂದಿನಿಂದ ಮೇ 23ರವರೆಗೆ ನಡೆಯಲಿರುವ ಈ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ.ಬಿ. ಪಾಟೀಲ್, “ಈ ಕ್ರೀಡಾಕೂಟದ ಮೂಲಕ ವಿಜಯಪುರ ನಗರಕ್ಕೆ ಹೊಸ ಕೀರ್ತಿ ಮತ್ತು ಹೊಸ ಗುರುತು ದೊರಕಿದೆ. ಒಂದು ಕಾಲದಲ್ಲಿ ಬರದ ನಾಡು, ಬಿಸಿಲಿನ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ” ಎಂದು ಹೇಳಿದರು.
2013ರ ನಂತರ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಕ್ರೀಡಾ ಕ್ಷೇತ್ರಕ್ಕೂ ವಿಶೇಷ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈಗಾಗಲೇ ವಿಜಯಪುರದಲ್ಲಿ ಸೈಕಲ್ ವೆಲೋಡ್ರೋಮ್ ಸ್ಥಾಪನೆಯಾಗಿದ್ದು, ಕನಕದಾಸ ಬಡಾವಣೆಯಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಲಿದ್ದು, ಬ್ಯಾಸ್ಕೆಟ್‌ಬಾಲ್ ಟೂರ್ನಮೆಂಟ್‌ಗಳನ್ನು ಕೂಡ ಆಯೋಜಿಸುವ ಯೋಜನೆ ಇದೆ ಎಂದು ಎಂ.ಬಿ. ಪಾಟೀಲ್ ಘೋಷಿಸಿದರು.
“ಇಂತಹ ಕ್ರೀಡಾ ಚಟುವಟಿಕೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ರೂಪುಗೊಳ್ಳಲು ಉತ್ತಮ ವೇದಿಕೆಯಾಗಲಿವೆ. ಕ್ರೀಡಾ ಮನೋಭಾವ, ಆರೋಗ್ಯಕರ ಸ್ಪರ್ಧೆ ಮತ್ತು ಯುವಶಕ್ತಿಯ ಸಂಯೋಜನೆಯಾದ ಈ ಕ್ರೀಡೋತ್ಸವಗಳು ವಿಜಯಪುರವನ್ನು ರಾಜ್ಯದ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿವೆ” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಕ್ರೀಡೆಗೆ ತೋರಿದ್ದ ಆಸಕ್ತಿ ಮತ್ತು ಯುವಕರಿಗೆ ನೀಡಿದ ಪ್ರೇರಣೆಯನ್ನು ಸ್ಮರಿಸಲಾಯಿತು. ಟೂರ್ನಿ ಆಯೋಜನೆಯಲ್ಲಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪನವರ ಅವರ ಶ್ರಮವನ್ನು ಎಂ.ಬಿ. ಪಾಟೀಲ್ ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಡಾ. ಆನಂದ್ ಕೆ, ಜಿಪಂ ಸಿಇಒ ಋಷಿ ಆನಂದ್, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮೇಯರ್ ಎಂ.ಎಸ್. ಕರಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾಪಟುಗಳು ಉತ್ಸಾಹಭರಿತರಾಗಿ ಭಾಗವಹಿಸಿ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಮೆರಗು ತಂದರು. ವಿಜಯಪುರದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.























