SK Home Ad
Home ಕ್ರೀಡೆ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಿಂದ ಭಾರತ ‘ಎ’ ಹೊರಕ್ಕೆ: 317 ರನ್ ಪೇರಿಸಿದರೂ ಶ್ರೀಲಂಕಾ ‘ಎ’...

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಿಂದ ಭಾರತ ‘ಎ’ ಹೊರಕ್ಕೆ: 317 ರನ್ ಪೇರಿಸಿದರೂ ಶ್ರೀಲಂಕಾ ‘ಎ’ ವಿರುದ್ಧ ಹೀನಾಯ ಸೋಲು!

0
4

ದೋಹಾದಲ್ಲಿ ಗುರುವಾರ ನಡೆದ ‘ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026’ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ‘ಎ’ ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಕಂಡ ತಿಲಕ್ ವರ್ಮಾ ನೇತೃತ್ವದ ಭಾರತ ‘ಎ’ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಭಾರತ ನೀಡಿದ್ದ 318 ರನ್‌ಗಳ ಬೃಹತ್ ಗುರಿಯನ್ನು ಶ್ರೀಲಂಕಾ ‘ಎ’ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 9.3 ಓವರ್‌ಗಳು ಬಾಕಿ ಇರುವಂತೆಯೇ (41.3 ಓವರ್‌ಗಳಲ್ಲಿ 318/2) ಬೆನ್ನಟ್ಟಿ ರಾಜಗಾಂಭೀರ್ಯದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಭಾರತದ ಬ್ಯಾಟಿಂಗ್:  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡಕ್ಕೆ ಯುವ ಓಪನರ್ ವೈಭವ್ ಸೂರ್ಯವಂಶಿ (40 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ಅಭಿಷೇಕ್ ಶರ್ಮಾ (78 ರನ್, 63 ಎಸೆತ, 11 ಬೌಂಡರಿ, 1 ಸಿಕ್ಸರ್) 80 ರನ್‌ಗಳ ಸ್ಫೋಟಕ ಆರಂಭ ನೀಡಿದರು. ಬಳಿಕ ಅಭಿಷೇಕ್ ಮತ್ತು ನಾಯಕ ತಿಲಕ್ ವರ್ಮಾ (53 ರನ್, 66 ಎಸೆತ) 79 ರನ್‌ಗಳ ಜೊತೆಯಾಟವಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ (21), ರಿಂಕು ಸಿಂಗ್ (12) ಹಾಗೂ ಸೂರ್ಯಾಂಶ್ ಶೆಡ್ಗೆ (10) ವಿಕೆಟ್ ಒಪ್ಪಿಸಿದ್ದರಿಂದ ರನ್ ವೇಗ ಕುಸಿಯಿತು. ಅಂತಿಮ ಹಂತದಲ್ಲಿ ಶಹಬಾಜ್ ಅಹ್ಮದ್ (ಅಜೇಯ 54* ರನ್, 48 ಎಸೆತ, 4 ಸಿಕ್ಸರ್) ಮತ್ತು ತನುಷ್ ಕೋಟ್ಯಾನ್ (28 ರನ್) 73 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 317 ರನ್‌ಗಳಿಗೆ ತಲುಪಿಸಿದರು.

ಲಂಕಾ ಓಪನರ್‌ಗಳ ಶತಕದ:  318 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ‘ಎ’ ತಂಡಕ್ಕೆ ಮೊದಲ ಓವರ್‌ನಲ್ಲೇ ತನುಷ್ ಕೋಟ್ಯಾನ್ ಕ್ಯಾಚ್ ಕೈಚೆಲ್ಲಿದ್ದು ತೀವ್ರ ದುಬಾರಿಯಾಯಿತು. ಜೀವದಾನದ ಲಾಭ ಪಡೆದ ಸಿನೆತ್ ಜಯವರ್ಧನೆ (105 ರನ್, 70 ಎಸೆತ, 10 ಬೌಂಡರಿ, 6 ಸಿಕ್ಸರ್) ಹಾಗೂ ಲಸಿತ್ ಕ್ರೂಸ್‌ಪುಲ್ಲೆ (116 ರನ್, 107 ಎಸೆತ, 12 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ಗೆ ಬರೋಬ್ಬರಿ 174 ರನ್‌ಗಳ ಜೊತೆಯಾಟವಾಡಿ ಭಾರತದ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು.

ಶಹಬಾಜ್ ಅಹ್ಮದ್ ಮತ್ತು ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದರೂ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ನಂತರ ಜೊತೆಯಾದ ನಿಶಾನ್ ಮದುಷ್ಕಾ (ಅಜೇಯ 58* ರನ್, 56 ಎಸೆತ) ಮತ್ತು ನಾಯಕ ಪವನ್ ರತ್ನಾಯಕೆ (ಅಜೇಯ 31* ರನ್, 16 ಎಸೆತ, 3 ಸಿಕ್ಸರ್) ಮುರಿಯದ 3ನೇ ವಿಕೆಟ್‌ಗೆ 53 ರನ್ ಸೇರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಸತತ ಎರಡನೇ ಬಾರಿಯೂ ಭಾರತ ‘ಎ’ ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ.