ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್‌ನಲ್ಲಿ ಸತತ ಗಾಯದ ಸಮಸ್ಯೆಗಳಿಂದ ಕಂಗಾಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಈಗ ಮಹತ್ವದ ಬದಲಾವಣೆಯೊಂದನ್ನು ಮಾಡಿಕೊಂಡಿದೆ. ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವ ಯುವ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಮುಂಬೈ ಇಂಡಿಯನ್ಸ್‌ನ ಮಾಜಿ ವೇಗಿ ಆಕಾಶ್ ಮಧ್ವಲ್‌ನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಆಯುಷ್ ಮ್ಹಾತ್ರೆ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಹಾಗೇ ಆಡಿದ ಆರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿ ಸಿಎಸ್‌ಕೆ ಅಗ್ರ ಕ್ರಮಾಂಕಕ್ಕೆ ಬಲ ತುಂಬಿದ್ದರು. ಆದ್ರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 27ನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಎಡಗಾಲಿನ ಸ್ನಾಯು ಸೆಳೆತಕ್ಕೆ (Hamstring Injury) ಒಳಗಾದ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಚೆನ್ನೈ ತಂಡದ ಬ್ಯಾಟಿಂಗ್ ಯೋಜನೆಗೆ ದೊಡ್ಡ ಹೊಡೆತ ನೀಡಿದೆ.
ಬೌಲಿಂಗ್ ವಿಭಾಗದಲ್ಲೂ ಸಂಕಷ್ಟ: ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಸಿಎಸ್‌ಕೆ ಬೌಲಿಂಗ್ ವಿಭಾಗವೂ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಪ್ರಮುಖ ವೇಗಿ ಖಲೀಲ್ ಅಹ್ಮದ್ ಸ್ನಾಯು ಹರಿತದ ಸಮಸ್ಯೆಯಿಂದ ಹೊರಬಿದ್ದಿದ್ದರೆ, ವಿದೇಶಿ ವೇಗಿ ನಾಥನ್ ಎಲ್ಲಿಸ್ ಕೂಡ ಅಲಭ್ಯರಾಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅನುಭವೀ ವೇಗಿಯ ಅಗತ್ಯವಿದ್ದ ಚೆನ್ನೈಗೆ ಆಕಾಶ್ ಮಧ್ವಲ್ ಆಸರೆಯಾಗಿದ್ದಾರೆ.
ಯಾರು ಈ ಆಕಾಶ್ ಮಧ್ವಲ್?: ಉತ್ತರಾಖಂಡದ ರೂರ್ಕಿಯ 32 ವರ್ಷದ ಆಕಾಶ್ ಮಧ್ವಲ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಟೆನಿಸ್ ಬಾಲ್ ಕ್ರಿಕೆಟ್‌ನಿಂದ ಬಂದ ಡೆತ್ ಓವರ್‌ಗಳಲ್ಲಿ ನಿಖರ ಯಾರ್ಕರ್‌ಗಳನ್ನು ಎಸೆಯುವಲ್ಲಿ ಪರಿಣಿತರು. 2023 ಮತ್ತು 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಹಾಗೂ 2025ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. 2023ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಕೇವಲ 5 ರನ್ ನೀಡಿ 5 ವಿಕೆಟ್ ಪಡೆದಿದ್ದು, ವೃತ್ತಿಜೀವನದ ಶ್ರೇಷ್ಠ ಪ್ರದರ್ಶನವಾಗಿದೆ. ಇದು ಐಪಿಎಲ್ ಪ್ಲೇಆಫ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ದಾಖಲೆಯೂ ಹೌದು.
ಒಟ್ಟು 17 ಐಪಿಎಲ್ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿರುವ ಮಧ್ವಲ್, ಸಿಎಸ್‌ಕೆ 30 ಲಕ್ಷ ರೂಪಾಯಿ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ. ಅನುಭವೀ ಎಂ.ಎಸ್. ಧೋನಿ ಮತ್ತು ಋತುರಾಜ್ ಗಾಯಕ್ವಾಡ್ ಸಾರಥ್ಯದಲ್ಲಿ ಮಧ್ವಲ್ ಯಾರ್ಕರ್ ವಿದ್ಯೆ ಚೆನ್ನೈ ತಂಡಕ್ಕೆ ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಸದ್ಯ ಕಾದುನೋಡಬೇಕಿದೆ.






















