ಚೆನ್ನೈ: ನಾಯಕ ರುತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟದ ಫಲವಾಗಿ ಚನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ವಿರುದ್ಧ 158 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್ ತನ್ನ ಲೆಕ್ಕಾಚಾರದಂತೆ ಚೆನ್ನೈ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಕೇವಲ 11 ರನ್‌ಗಳಿಗೆ ಔಟ್ ಮಾಡಿತು.
ಸ್ಯಾಮ್ಸನ್ ನಿರ್ಗಮನದ ಬಳಿಕ ಚೈನ್ನೈ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್ ನಡೆಯಿತು. ಉರ್ವಿಲ್ ಪಟೇಲ್ (4), ಸರ್ಫರಾಜ್ ಖಾನ್ (0), ಡೆವಾಲ್ಡ್ ಬ್ರೆವಿಸ್ (2) ಒಂದಂಕಿ ಮೊತ್ತವನ್ನು ದಾಟದೆ ಪೆವಿಲಿಯನ್ ಸೇರಿದರು.
5ನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಶಿವಂ ದುಬೆ 17 ಎಸೆತದಲ್ಲಿ 22 ರನ್ ಗಳಿಸಿದರು. ರುತುರಾಜ್-ದುಬೆ ಜೋಡಿ 59 ರನ್‌ಗಳ ಜತೆಯಾಟ ನಡೆಸಿದ್ದೆ ಚೆನ್ನೈ ಪರ ಬಂದ ಅತ್ಯತ್ತಮ ಜತೆಯಾಟವಾಯಿತು.
ಬಳಿಕ ಯಾವೊಬ್ಬ ಆಟಗಾರನೂ ಸಹ ರುತುರಾಜ್ ಜತೆ ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ರುತುರಾಜ್ 60 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ನಿಂದ 74 ರನ್ ಗಳಿಸಿದರು.
ಗುಜರಾತ್ ಪರ ಕಗಿಸೊ ರಬಾಡ 23ಕ್ಕೆ 3, ಅರ್ಷದ್ ಖಾನ್ 43ಕ್ಕೆ 2 ವಿಕೆಟ್ ಪಡೆದರೆ, ಮನ್ವ ಸುತಾರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.























