ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್ ಆದ ಅನಾಹತ್ ಸಿಂಗ್; ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವ ಪ್ರಶಸ್ತಿ
ನವದೆಹಲಿ : ಭಾರತದ ಯುವ ಸ್ಕ್ವಾಶ್ ತಾರೆ ಅನಾಹತ್ ಸಿಂಗ್ ವಿಶ್ವ ಕ್ರೀಡಾ ವೇದಿಕೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್ನಲ್ಲಿ ನಡೆದ 2026ರ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 18 ವರ್ಷ ವಯಸ್ಸಿನ ಅನಾಹತ್, ಫೈನಲ್ ಪಂದ್ಯದಲ್ಲಿ ಈಜಿಪ್ಟ್‌ನ ಎರಡನೇ ಶ್ರೇಯಾಂಕಿತ ಆಟಗಾರ್ತಿ ರುಕಯ್ಯಾ ಸಲೇಮ್ ಅವರನ್ನು 11-3, 11-7, 11-9 ನೇರ ಸೆಟ್‌ಗಳಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅನಾಹತ್ ಎದುರಾಳಿಗೆ ಯಾವುದೇ ಅವಕಾಶ ನೀಡದೆ ಕೇವಲ ಮೂರು ಸೆಟ್‌ಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ‘ಮನ್ ಕಿ ಬಾತ್’: ಕಾರ್ಗಿಲ್ ಯೋಧರಿಗೆ ನಮನ – ಜಲ ಸಂರಕ್ಷಣೆಗೆ ಕರೆ
ಭಾರತದ ಸ್ಕ್ವಾಶ್ ಇತಿಹಾಸದಲ್ಲಿ ಹೊಸ ಅಧ್ಯಾಯ : ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಆರಂಭವಾದ ನಂತರ ಈವರೆಗೆ ಯಾವುದೇ ಭಾರತೀಯ ಆಟಗಾರ ಅಥವಾ ಆಟಗಾರ್ತಿ ಪ್ರಶಸ್ತಿ ಗೆದ್ದಿರಲಿಲ್ಲ. 2005ರಲ್ಲಿ ಭಾರತದ ಜೋಶ್ನಾ ಚಿನಪ್ಪ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಈಗ ಅನಾಹತ್ ಸಿಂಗ್ ಆ ದಾಖಲೆಯನ್ನು ಮುರಿದು, ವಿಶ್ವ ಜೂನಿಯರ್ ಸ್ಕ್ವಾಶ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಭಾರತೀಯ ಸ್ಕ್ವಾಶ್‌ಗೆ ಹೊಸ ಮೈಲಿಗಲ್ಲು ಎಂದು ಕ್ರೀಡಾ ವಲಯ ಪ್ರಶಂಸಿಸಿದೆ.
ಈಜಿಪ್ಟ್‌ನ 13 ವರ್ಷಗಳ ಪ್ರಾಬಲ್ಯಕ್ಕೆ ತೆರೆ : ಮಹಿಳೆಯರ ವಿಶ್ವ ಜೂನಿಯರ್ ಸಿಂಗಲ್ಸ್ ವಿಭಾಗದಲ್ಲಿ 2011ರಿಂದ ಸತತ 13 ಆವೃತ್ತಿಗಳವರೆಗೆ ಈಜಿಪ್ಟ್ ಆಟಗಾರ್ತಿಯರೇ ಚಾಂಪಿಯನ್ ಆಗುತ್ತಿದ್ದರು. ಅನಾಹತ್ ಸಿಂಗ್ ಈ ಸುದೀರ್ಘ ಪ್ರಾಬಲ್ಯಕ್ಕೆ ಅಂತ್ಯ ಹಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇದರೊಂದಿಗೆ, 2010ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಬಳಿಕ ವಿಶ್ವ ಜೂನಿಯರ್ ಪ್ರಶಸ್ತಿ ಗೆದ್ದ ಮೊದಲ ಈಜಿಪ್ಟ್‌ಯೇತರ ಆಟಗಾರ್ತಿ ಎಂಬ ದಾಖಲೆಯನ್ನೂ ಅನಾಹತ್ ತಮ್ಮ ಹೆಸರಿಗೆ ಬರೆದಿದ್ದಾರೆ.
ಇದನ್ನೂ ಓದಿ: ಬಾರ್ ಬಳಿ ಕಾರು ಸ್ಫೋಟ: ಬೆಚ್ಚಿಬಿದ್ದ ಹಿಪ್ಪರಗಿ ಜನ..!
ಭಾರತೀಯ ಕ್ರೀಡೆಗೆ ಮತ್ತೊಂದು ಹೆಮ್ಮೆ : ಕಳೆದ ಕೆಲವು ವರ್ಷಗಳಿಂದ ಅನಾಹತ್ ಸಿಂಗ್ ಜೂನಿಯರ್ ಹಾಗೂ ಸೀನಿಯರ್ ಮಟ್ಟದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು. ಅವರ ನಿರಂತರ ಪರಿಶ್ರಮ ಮತ್ತು ಸಾಧನೆ ಇದೀಗ ವಿಶ್ವ ಚಾಂಪಿಯನ್ ಪಟ್ಟದ ಮೂಲಕ ಮತ್ತಷ್ಟು ಮೆರಗು ಪಡೆದಿದೆ.
ಈ ಗೆಲುವಿನೊಂದಿಗೆ ಭಾರತದಲ್ಲಿ ಸ್ಕ್ವಾಶ್ ಕ್ರೀಡೆಗೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದ್ದು, ಯುವ ಕ್ರೀಡಾಪಟುಗಳಿಗೆ ಅನಾಹತ್ ಸ್ಫೂರ್ತಿಯಾಗಿದ್ದಾರೆ.






















