ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಸಂದೇಶವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮತ್ತೆ ‘ಹಸಿರು ಜರ್ಸಿ’ ಅಭಿಯಾನಕ್ಕೆ ಚಾಲನೆ ನೀಡಿದೆ. IPL 2026ರ ಭಾಗವಾಗಿ ಏಪ್ರಿಲ್ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ RCB ಆಟಗಾರರು ಹಸಿರು ಜರ್ಸಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ.
ಈ ವಿಶೇಷ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ‘Go Green’ ಅಭಿಯಾನವನ್ನು RCB 2011ರಿಂದಲೇ ಮುಂದುವರಿಸುತ್ತಿದ್ದು, ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ಸೀಸನ್‌ನಲ್ಲಿ ಒಂದು ಪಂದ್ಯವನ್ನು ಹಸಿರು ಜರ್ಸಿಯಲ್ಲಿ ಆಡುತ್ತದೆ.
ಹಸಿರು ಜರ್ಸಿಯ ವಿಶೇಷತೆ : ಈ ಜರ್ಸಿಗಳನ್ನು 100% ಮರುಬಳಕೆಯ ತ್ಯಾಜ್ಯದಿಂದ ತಯಾರಿಸಲಾಗಿದ್ದು, ಪ್ಲಾಸ್ಟಿಕ್ ಮರುಬಳಕೆಗೆ ಉತ್ತೇಜನ ನೀಡುವ ಸಂದೇಶವನ್ನು ಹೊತ್ತಿದೆ. ಪಂದ್ಯಕ್ಕೂ ಮುನ್ನ ಟಾಸ್ ವೇಳೆ RCB ನಾಯಕ ರಜತ್ ಪಾಟಿದಾರ್ ಅವರು ಎದುರಾಳಿ ತಂಡದ ನಾಯಕನಿಗೆ ಗಿಡದ ಸಸಿ ನೀಡಿ ಪರಿಸರ ಸಂರಕ್ಷಣೆಯ ಸಂಕೇತಾತ್ಮಕ ಸಂದೇಶ ನೀಡಲಿದ್ದಾರೆ.
ಹಸಿರು ಜರ್ಸಿಯಲ್ಲಿ RCB ದಾಖಲೆ : RCB ತಂಡವು ಹಸಿರು ಜರ್ಸಿಯಲ್ಲಿ ಮಿಶ್ರ ಫಲಿತಾಂಶಗಳನ್ನು ಕಂಡಿದ್ದರೂ, ಅಭಿಮಾನಿಗಳಲ್ಲಿ ಈ ಪಂದ್ಯಕ್ಕೆ ವಿಶೇಷ ಭಾವನಾತ್ಮಕ ಸ್ಥಾನವಿದೆ. 2016ರಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟದ್ದು ಇಂದಿಗೂ ನೆನಪಿನಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ #GoGreenWithRCB ಅಭಿಯಾನ ಭಾರೀ ಟ್ರೆಂಡ್ ಆಗುತ್ತಿದೆ. RCB ತಂಡದ ಈ ಪ್ರಯತ್ನವು ಕ್ರೀಡೆಯ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.























