ಲಖನೌ: ನಾಯಕ ಶ್ರೇಯಸ್ ಅಯ್ಯರ್ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸುಲಭ ಜಯ ದಾಖಲಿಸಿತು.
ಲಖನೌ ನೀಡಿದ್ದ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 12 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.
ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿರುವ ಪಂಜಾಬ್ ಭವಿಷ್ಯವನ್ನು ಭಾನುವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ನಿರ್ಧಾರ ಮಾಡಲಿದೆ.
ಆರಂಭದಲ್ಲಿಯೇ ಪ್ರಿಯಾಂಶ್ ಆರ್ಯ (0) ಮತ್ತು ಕೂಪರ್ ಕೊನೊಲಿ (18) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಮೂರನೇ ವಿಕೆಟ್‌ಗೆ ಪ್ರಭಸಿಮ್ರನ್ ಸಿಂಗ್ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ ಜೋಡಿ 140 ರನ್‌ಗಳ ಅದ್ಭುತ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯಿತು.
ಪ್ರಭಸಿಮ್ರನ್ ಸಿಂಗ್ 39 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ನಿಂದ 69 ರನ್‌ಗಳಿಸಿ ಅರ್ಜುನ್ ತೆಂಡೂಲ್ಕರ್ ಎಸೆತದಲ್ಲಿ ಎಲ್‌ಬಿಡಬ್ಲುಗೆ ಬಲಿಯಾದರು.
ಇನ್ನೊಂದು ತುದಿಯಲ್ಲಿ ಶ್ರೇಯಸ್ ಅಯ್ಯರ್ ಕೇವಲ 51 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್‌ನಿಂದ ಅಜೇಯ 101 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಖನೌ ತಂಡಕ್ಕೆ ಅರ್ಶಿನ್ ಕುಲಕರ್ಣಿ (0) ಮತ್ತು ನಿಕೋಲಸ್ ಪೂರನ್ (2) ವಿಕೆಟ್ ಉರುಳಿಸುವ ಮೂಲಕ ಆರಂಭದಲ್ಲಿಯೇ ಪಂಜಾಬ್ ಆಘಾತವನ್ನು ನೀಡಿತು.
ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬರುತ್ತಿದ್ದಂತೆ ಪಂಜಾಬ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದ ಆಯುಷ್ ಬದೋನಿ ಕೇವಲ 18 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನಿಂದ 43 ರನ್‌ಗಳಿಸಿ ಚಾಹಲ್‌ಗೆ ವಿಕೆಟ್ ಒಪ್ಪಿಸಿದರು.
ಜೋಶ್ ಇಂಗ್ಲಿಸ್ ಜತೆಯಾದ ನಾಯಕ ರಿಷಭ್ ಪಂತ 43 ಎಸೆತದಲ್ಲಿ 65 ರನ್‌ಗಳ ಜತೆಯಾಟ ನಡೆಸಿದರು. ಈ ವೇಳೆ ಪಂತ್ ವೈಯಕ್ತಿಕ 26 ರನ್‌ಗಳ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು.
ಉತ್ತಮ ಬ್ಯಾಟಿಂಗ್ ಆಡುತ್ತಿದ್ದ ಜೋಶ್ ಇಂಗ್ಲಿಸ್ 44 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್‌ನಿಂದ 72 ರನ್ ಗಳಿಸಿ, 17ನೇ ಓವರ್‌ನ ಕೊನೆಯ ಎಸೆತದಲ್ಲಿ ಶಶಾಂಕ್ ಸಿಂಗ್ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ಕೊಟ್ಟು ಔಟಾದರು.
ಅಬ್ದುಲ್ ಸಮದ್ ಅಜೇಯ 37 ಮತ್ತು ಅರ್ಜುನ ತೆಂಡೂಲ್ಕರ್ 5 ರನ್ ಗಳಿಸಿ ಅಜೇಯರಾಗಿ ಉಳಿದರು.
ಪಂಜಾಬ್ ಕಿಂಗ್ಸ್ ಪರ ಯುಜುವೇಂದ್ರ ಚಾಹಲ್ 25ಕ್ಕೆ 2, ಮಾರ್ಕೊ ಜಾನ್ಸೆನ್ 29ಕ್ಕೆ 2 ಮತ್ತು ಅಜ್ಮತುಲ್ಲಾ ಒಮರ್ಜೈ, ಶಶಾಂಕ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.























