Home Advertisement
Home ಕ್ರೀಡೆ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕಮ್‌ಬ್ಯಾಕ್?: ಬಾಲ್ಯದ ಕೋಚ್ ಬಿಚ್ಚಿಟ್ಟರು ಅಸಲಿ ಸತ್ಯ!

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕಮ್‌ಬ್ಯಾಕ್?: ಬಾಲ್ಯದ ಕೋಚ್ ಬಿಚ್ಚಿಟ್ಟರು ಅಸಲಿ ಸತ್ಯ!

0
58

ದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ ನಿವೃತ್ತಿ ಹಿಂಪಡೆದು, ಮತ್ತೆ ಮೈದಾನಕ್ಕಿಳಿಯಲಿದ್ದಾರಾ? ಇಂತಹುದೊಂದು ಬಿಗ್ ಅಪ್ಡೇಟ್‌ನ್ನು ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೊಹ್ಲಿ ಮತ್ತು ರೋಹಿತ್ ಶರ್ಮಾ ದಿಢೀರನೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಈ ಬೆನ್ನಲ್ಲೇ ಶುಭಮನ್ ಗಿಲ್‌ವರನ್ನು ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನನ್ನಾಗಿ ನೇಮಿಸಲಾಗಿತ್ತು.

ಪ್ರಸ್ತುತ ಕೊಹ್ಲಿ ಟಿ20 ಮತ್ತು ಟೆಸ್ಟ್ ಮಾದರಿಗಳಿಂದ ದೂರವಿದ್ದು, ಭಾರತ ಪರ ಕೇವಲ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಹಾಗೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ತೋರುತ್ತಿರುವ ಅದ್ಭುತ ಫಾರ್ಮ್, ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಬೇಕೆಂಬ ಚರ್ಚೆಯನ್ನು ಮುಂಚೂಣಿಗೆ ತಂದಿದೆ. ಕೋಟ್ಯಂತರ ಅಭಿಮಾನಿಗಳು ಕೊಹ್ಲಿ ಮತ್ತೆ ಬಿಳಿ ಉಡುಪಿನಲ್ಲಿ ಕಾಣಿಸಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ.

ಇದೇ ವಿಷಯದ ಕುರಿತು ಮಾತನಾಡಿರುವ ಕೋಚ್ ರಾಜ್‌ಕುಮಾರ್ ಶರ್ಮಾ, “ವಿರಾಟ್ ನಿಮ್ಮ ಮಾತು ಕೇಳುತ್ತಾರೆ, ಹಾಗಾಗಿ ಟೆಸ್ಟ್‌ಗೆ ಮರಳುವಂತೆ ಮನವೊಲಿಸಿ ಎಂದು ಹಲವರು ನನ್ನ ಬಳಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ, ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ” ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟರ್ ಹಾಗೂ ಯಶಸ್ವಿ ನಾಯಕನಾಗಿರುವ ಕೊಹ್ಲಿ, 123 ಟೆಸ್ಟ್ ಪಂದ್ಯಗಳಿಂದ 9,230 ರನ್ ಗಳಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ 68 ಟೆಸ್ಟ್‌ಗಳಲ್ಲಿ 40 ಗೆಲುವು ಸಾಧಿಸಿದ್ದು, 2018ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಚಾರಿತ್ರಿಕ ಸರಣಿ ಜಯ ದಾಖಲಿಸಿತ್ತು.

ಸದ್ಯ ಐಪಿಎಲ್ 2026ರಲ್ಲೂ ಕೊಹ್ಲಿ ಅಬ್ಬರ ಮುಂದುವರಿದಿದೆ. ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ 13 ಪಂದ್ಯಗಳಿಂದ 54.20ರ ಸರಾಸರಿಯಲ್ಲಿ 1 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 542 ರನ್ ಬಾರಿಸಿ ಮಿಂಚುತ್ತಿದ್ದಾರೆ. ಇವರ ಭರ್ಜರಿ ಫಾರ್ಮ್ ನೆರವಿನಿಂದಲೇ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿದ ಆರ್‌ಸಿಬಿ, ಈ ಸೀಸನ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.