ಮಾಜಿ ಪ್ರಧಾನಿ ರಾಜೀವ್ ಗಾಂಧಿ 35ನೇ ಪುಣ್ಯತಿಥಿ; ದೇಶಾದ್ಯಂತ ಭಯೋತ್ಪಾದನಾ ವಿರೋಧಿ ದಿನ ಆಚರಣೆ
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಇಂದು 35 ವರ್ಷಗಳು ಪೂರ್ತಿಯಾಗಿದ್ದು, ದೇಶಾದ್ಯಂತ ಅವರನ್ನು ಸ್ಮರಿಸಲಾಯಿತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ವೇಳೆ ಎಲ್‌ಟಿಟಿಇ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಯಾಗಿದ್ದರು. ಈ ಹಿನ್ನೆಲೆ ಪ್ರತಿವರ್ಷ ಮೇ 21ನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ.
ರಾಜಧಾನಿ ದೆಹಲಿಯ ವೀರಭೂಮಿಯಲ್ಲಿ ನಡೆದ ಸ್ಮರಣಾ ಕಾರ್ಯಕ್ರಮದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂದಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ರಾಜೀವ್ ಗಾಂಧಿ ಅವರ ಆಡಳಿತಾವಧಿಯಲ್ಲಿ ದೇಶದಲ್ಲಿ ಹಲವು ಮಹತ್ವದ ಸುಧಾರಣೆಗಳು ಜಾರಿಯಾಗಿದ್ದವು. ವಿಶೇಷವಾಗಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವುದು, ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬುವುದು, ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಚಾಲನೆ ನೀಡುವುದು ಅವರ ಪ್ರಮುಖ ಕೊಡುಗೆಗಳಾಗಿ ಸ್ಮರಿಸಲ್ಪಟ್ಟವು.
ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ್ ಗಾಂಧಿ ಅವರ ಆಧುನಿಕ ಭಾರತದ ಕನಸು, ತಂತ್ರಜ್ಞಾನ ಅಭಿವೃದ್ಧಿಗೆ ನೀಡಿದ ಆದ್ಯತೆ ಹಾಗೂ ಶಾಂತಿ ಒಪ್ಪಂದಗಳ ಪ್ರಯತ್ನಗಳನ್ನು ಸ್ಮರಿಸಿದೆ. ಪಕ್ಷದ ಅಧಿಕೃತ ಖಾತೆಯಿಂದ ವೀಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ಇದೇ ವೇಳೆ, ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ತಂದೆಯನ್ನು ಸ್ಮರಿಸಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. “ಅಪ್ಪಾ, ನೀವು ಕಲ್ಪಿಸಿಕೊಂಡ ಕೌಶಲ್ಯಪೂರ್ಣ, ಸಮೃದ್ಧ ಮತ್ತು ಬಲಿಷ್ಠ ಭಾರತವನ್ನು ಸಾಕಾರಗೊಳಿಸುವ ನನ್ನ ಜವಾಬ್ದಾರಿಯನ್ನು ನಾನು ಪೂರೈಸುತ್ತೇನೆ. ನಿಮ್ಮ ಬೋಧನೆಗಳು, ನಿಮ್ಮ ಮೌಲ್ಯಗಳು ಮತ್ತು ನಿಮ್ಮ ನೆನಪುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ” ಎಂದು ಅವರು ಬರೆದುಕೊಂಡಿದ್ದಾರೆ.
ವೀರಭೂಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ರಾಜೀವ್ ಗಾಂಧಿ ಅವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು. ದೇಶದ ವಿವಿಧ ಭಾಗಗಳಲ್ಲಿಯೂ ಭಯೋತ್ಪಾದನೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.






















