SK Home Ad
Home ಕ್ರೀಡೆ ಐಪಿಎಲ್ ಮಹಾಸಮರ: ಆರ್‌ಸಿಬಿ–ಗುಜರಾತ್ ನಡುವೆ ಫೈನಲ್ ಫೈಟ್

ಐಪಿಎಲ್ ಮಹಾಸಮರ: ಆರ್‌ಸಿಬಿ–ಗುಜರಾತ್ ನಡುವೆ ಫೈನಲ್ ಫೈಟ್

0
10

ಅಹಮದಾಬಾದ್: ಕ್ರಿಕೆಟ್ ಪ್ರಿಯರ ಬಹುದೊಡ್ಡ ಹಬ್ಬವಾದ ಟಾಟಾ ಐಪಿಎಲ್ 2026ರ ಮಹಾ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಬಲಿಷ್ಠ ಗುಜರಾತ್ ಟೈಟನ್ಸ್ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.

ಲೀಗ್ ಹಂತದಲ್ಲಿ ತಲಾ 18 ಅಂಕಗಳನ್ನು ಗಳಿಸಿ ನೆಟ್ ರನ್‌ರೇಟ್ ಆಧಾರದಲ್ಲಿ ಮೊದಲ ಎರಡು ಸ್ಥಾನ ಪಡೆದಿದ್ದ ಈ ಉಭಯ ತಂಡಗಳ ನಡುವಿನ ಈ ಪಂದ್ಯ ರೋಚಕತೆಯ ಪರಾಕಾಷ್ಠೆ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಧರ್ಮಶಾಲಾದಲ್ಲಿ ಗುಜರಾತ್ ವಿರುದ್ಧವೇ 92 ರನ್‌ಗಳ ಬೃಹತ್ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ರಜತ್ ಪಾಟಿದಾರ್ ಅವರ ಅಬ್ಬರದ ಅಜೇಯ 93 (33 ಎಸೆತ) ರನ್‌ಗಳ ನೆರವಿನಿಂದ ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ (254/5) ಕಲೆಹಾಕಿದ್ದ ಆರ್‌ಸಿಬಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಮೋಘ ಲಯದಲ್ಲಿದೆ.

ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್ ಮತ್ತು ಕೃನಾಲ್ ಪಾಂಡ್ಯ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಹಾಗೂ ಭುವನೇಶ್ವರ್ ಕುಮಾರ್, ಜೇಕಬ್ ಡಫಿ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ವೇಗದ ಬೌಲಿಂಗ್ ಪಡೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತರೂ, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.

ಶುಭಮನ್ ಗಿಲ್ ಅವರ ಆಕರ್ಷಕ ಬ್ಯಾಟಿಂಗ್, ಜೋಸ್ ಬಟ್ಲರ್ ಅವರ ಸ್ಫೋಟಕ ಆಟ ಮತ್ತು ರಾಹುಲ್ ತೇವಾಟಿಯಾ ಅವರ ಫಿನಿಶಿಂಗ್ ಸಾಮರ್ಥ್ಯ ತಂಡದ ಪ್ರಮುಖ ಬಲವಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ಅವರಂತಹ ವಿಶ್ವದರ್ಜೆಯ ಆಟಗಾರರು ಆರ್‌ಸಿಬಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ.

ಪಿಚ್ ವರದಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ನೆರವು ನೀಡುತ್ತದೆ. ಇಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಮಾಡಲು ಇಷ್ಟಪಡಬಹುದು. ಈ ಸೀಸನ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಆರ್‌ಸಿಬಿ ತನ್ನ ತವರಿನಲ್ಲಿ ಹಾಗೂ ಕ್ವಾಲಿಫೈಯರ್ 1 ರಲ್ಲಿ ಗೆದ್ದಿದ್ದರೆ, ಗುಜರಾತ್ ತನ್ನ ತವರು ಮೈದಾನದಲ್ಲಿ ಆರ್‌ಸಿಬಿಯನ್ನು ಸೋಲಿಸಿತ್ತು. ಹೀಗಾಗಿ ಇತ್ತಂಡಗಳಿಗೂ ಪಿಚ್ ಮತ್ತು ಪರಿಸ್ಥಿತಿಯ ಸಂಪೂರ್ಣ ಅರಿವಿದೆ.

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದ್ದು, ಗುಜರಾತ್ ತಂಡಕ್ಕೆ ಇದು ತವರು ಮೈದಾನದ ಲಾಭ ತಂದುಕೊಡಬಹುದು. ಆರ್‌ಸಿಬಿ ಸತತ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿದೆ.