ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರು ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಉಪರಾಷ್ಟ್ರಪತಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಿ ಭಕ್ತಿಭಾವದಿಂದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಥಾವರ್‌ಚಂದ್ ಗೆಹ್ಲೋಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪೂಜೆ ಬಳಿಕ ಉಪರಾಷ್ಟ್ರಪತಿಗಳು ಕ್ಷೇತ್ರದ ಪ್ರಸಿದ್ಧ ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ಭಕ್ತರಿಗೆ ನೀಡಲಾಗುತ್ತಿರುವ ಉಚಿತ ಅನ್ನದಾಸೋಹ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಧರ್ಮಸ್ಥಳ ಕ್ಷೇತ್ರದ ಮೂಲಕ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಉಪರಾಷ್ಟ್ರಪತಿಗಳು, ಸಮಾಜಮುಖಿ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.






















