Home Advertisement
Home ಕ್ರೀಡೆ Infosysಗೆ ಜಾಗತಿಕ ಬ್ರಾಂಡ್ ರಾಯಭಾರಿ ಕಾರ್ಲೋಸ್ ಅಲ್ಕರಾಜ್

Infosysಗೆ ಜಾಗತಿಕ ಬ್ರಾಂಡ್ ರಾಯಭಾರಿ ಕಾರ್ಲೋಸ್ ಅಲ್ಕರಾಜ್

0
74

ಬೆಂಗಳೂರು: ಜಾಗತಿಕ ಮಟ್ಟದಲ್ಲಿ AI-ಆಧಾರಿತ ತಂತ್ರಜ್ಞಾನ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ Infosys ಸಂಸ್ಥೆ, ಪುರುಷರ ಟೆನಿಸ್ ವಿಶ್ವದ ನಂ.1 ಆಟಗಾರನಾಗಿ ಹೊರಹೊಮ್ಮಿದ ಕಾರ್ಲೋಸ್ ಅಲ್ಕರಾಜ್ (Carlos Alcaraz) ಅವರನ್ನು ತನ್ನ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿದೆ. ಈ ಬಹುವರ್ಷಗಳ ಪಾಲುದಾರಿಕೆ ಟೆನಿಸ್ ಕ್ರೀಡೆ ಮತ್ತು ತಂತ್ರಜ್ಞಾನ ಲೋಕದ ನಡುವೆ ಹೊಸ ಅಧ್ಯಾಯಕ್ಕೆ ಚಾಲನೆ ನೀಡಲಿದೆ.

ಈ ಒಪ್ಪಂದದ ಮೂಲಕ ಕ್ರೀಡಾ ಶ್ರೇಷ್ಠತೆ ಮತ್ತು AI-ಚಾಲಿತ ನಾವೀನ್ಯತೆ ಒಂದಾಗುತ್ತಿದ್ದು, ಇನ್ಫೋಸಿಸ್‌ನ “AI-first” ದೃಷ್ಟಿಕೋನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿದೆ. ಅಲ್ಕರಾಜ್ ಅವರ ನಿರಂತರ ಪರಿಶ್ರಮ, ಸ್ಥಿರತೆ ಮತ್ತು ಶ್ರೇಷ್ಠತೆಯ ಹುಡುಕಾಟ ಇನ್ಫೋಸಿಸ್ ಮೌಲ್ಯಗಳಿಗೆ ಹೊಂದಿಕೆಯಾಗುತ್ತವೆ ಎಂದು ಸಂಸ್ಥೆ ತಿಳಿಸಿದೆ.

ಅಲ್ಕರಾಜ್, ತಮ್ಮ ವೃತ್ತಿಜೀವನದಲ್ಲಿ ಹಲವು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದು, ಅತಿ ಕಿರಿಯ ವಯಸ್ಸಿನಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ ದಾಖಲೆ ಮಾಡಿದ್ದಾರೆ. ಅವರೊಂದಿಗೆ ಕೈಜೋಡಿಸುವ ಮೂಲಕ ಇನ್ಫೋಸಿಸ್ ಟೆನಿಸ್ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯನ್ನು ಮತ್ತಷ್ಟು ಗಾಢಗೊಳಿಸಲು ಮುಂದಾಗಿದೆ.

ಈ ಸಹಯೋಗದ ಭಾಗವಾಗಿ, ಇನ್ಫೋಸಿಸ್ ತನ್ನ AI ವೇದಿಕೆ “ಟೋಪಾಜ್” ಮೂಲಕ ಅಲ್ಕರಾಜ್ ಮತ್ತು ಅವರ ತರಬೇತಿ ತಂಡಕ್ಕೆ AI-ಚಾಲಿತ ಪಂದ್ಯ ವಿಶ್ಲೇಷಣೆ ಮತ್ತು ವೈಯಕ್ತಿಕ ಕಾರ್ಯಕ್ಷಮತೆ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಿದೆ. ಇದರಿಂದ ಪಂದ್ಯ ತಯಾರಿ, ತಂತ್ರ ರೂಪಣೆ ಮತ್ತು ಆಟದ ಸುಧಾರಣೆಗೆ ಸಹಾಯವಾಗಲಿದೆ.

ಇದಲ್ಲದೆ, ಈ ಪಾಲುದಾರಿಕೆ ಕೇವಲ ಕ್ರೀಡೆಯಲ್ಲದೇ ಸಾಮಾಜಿಕ ಹೊಣೆಗಾರಿಕೆಯತ್ತವೂ ವಿಸ್ತರಿಸಿದೆ. ಇನ್ಫೋಸಿಸ್ ಮತ್ತು ಕಾರ್ಲೋಸ್ ಅಲ್ಕರಾಜ್ ಫೌಂಡೇಶನ್ ಒಟ್ಟಾಗಿ ತಂತ್ರಜ್ಞಾನ ಬಳಸಿ ಸಮಾಜಮುಖಿ ಉಪಕ್ರಮಗಳನ್ನು ಕೈಗೊಳ್ಳಲಿವೆ.

ಅಲ್ಕರಾಜ್ ತಮ್ಮ ಪ್ರತಿಕ್ರಿಯೆಯಲ್ಲಿ, “ಇನ್ಫೋಸಿಸ್‌ನೊಂದಿಗೆ ಕೆಲಸ ಮಾಡುವುದರಿಂದ ನನ್ನ ಆಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು AI ಮತ್ತು ಡೇಟಾವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.

ಇನ್ಫೋಸಿಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಸುಮಿತ್ ವೀರಮಾನಿ, “ಕಾರ್ಲೋಸ್ ಹೊಸ ಪೀಳಿಗೆಯ ಚೈತನ್ಯ ಮತ್ತು ಶ್ರೇಷ್ಠತೆಯ ಪ್ರತೀಕ. ಈ ಸಹಯೋಗದಿಂದ ಟೆನಿಸ್ ಮತ್ತು ತಂತ್ರಜ್ಞಾನ ಎರಡರಲ್ಲೂ ಹೊಸ ಮೈಲಿಗಲ್ಲು ನಿರ್ಮಾಣವಾಗಲಿದೆ” ಎಂದು ತಿಳಿಸಿದ್ದಾರೆ.