SK Home Ad
Home ಕ್ರೀಡೆ ಬೌಂಡರಿ ಲೈನ್‌ನಲ್ಲಿ ಸೂರ್ಯವಂಶಿ-ಬಿಷ್ಣೋಯ್ ಡಿಕ್ಕಿ: ಭಾರತದ ಬಿಗಿಹಿಡಿತಕ್ಕೆ ಪಾಕ್ ಕಂಗಾಲು!

ಬೌಂಡರಿ ಲೈನ್‌ನಲ್ಲಿ ಸೂರ್ಯವಂಶಿ-ಬಿಷ್ಣೋಯ್ ಡಿಕ್ಕಿ: ಭಾರತದ ಬಿಗಿಹಿಡಿತಕ್ಕೆ ಪಾಕ್ ಕಂಗಾಲು!

0
10

ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಚಿನ್ನದ ಪದಕದತ್ತ ದಾಪುಗಾಲು ಇರಿಸಿದೆ. ಜಪಾನ್‌ನ ನಿಸ್ಸಿನ್‌ನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಕದನದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 211 ರನ್‌‌ಗಳ ಬೃಹತ್ ಮೊತ್ತ ಪೇರಿಸಿತು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 61 ರನ್ ಸಿಡಿಸಿ ಪವರ್‌ಪ್ಲೇನಲ್ಲೇ ಪಾಕ್ ಬೌಲರ್‌ಗಳನ್ನು ಕಂಗೆಡಿಸಿದರು. ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಕೇವಲ 22 ಎಸೆತಗಳಲ್ಲಿ ಅಜೇಯ 51 ರನ್ ಚಚ್ಚಿದರೆ, ಶಿವಂ ದುಬೆ 14 ಎಸೆತಗಳಲ್ಲಿ 27 ರನ್ ಸಿಡಿಸಿ ಭಾರತ 200ರ ಗಡಿ ದಾಟಲು ನೆರವಾದರು.

212 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡಿದರು. ಅಕ್ಷರ್ ಪಟೇಲ್ (2 ವಿಕೆಟ್) ಮತ್ತು ವಾಷಿಂಗ್ಟನ್ ಸುಂದರ್ ಅವರ ಕರಾರುವಾಕ್ ದಾಳಿಗೆ ನಾಯಕ ಸಾಹಿಬ್ಜಾದಾ ಫರ್ಹಾನ್ ಹಾಗೂ ಉಸ್ಮಾನ್ ಖಾನ್ ಪೆವಿಲಿಯನ್ ಸೇರಿದರು. ಆದರೆ ಪಂದ್ಯದ 9ನೇ ಓವರ್‌ನಲ್ಲಿ ಮೈದಾನದಲ್ಲಿ ಅನಿರೀಕ್ಷಿತ ಹೈಡ್ರಾಮಾ ನಡೆಯಿತು. ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಹಸನ್ ನವಾಜ್ ಹೊಡೆದ ಚೆಂಡನ್ನು ಹಿಡಿಯಲು ಓಡಿಬಂದ ವೈಭವ್ ಸೂರ್ಯವಂಶಿ ಹಾಗೂ ರವಿ ಬಿಷ್ಣೋಯ್ ಪರಸ್ಪರ ಜೋರಾಗಿ ಡಿಕ್ಕಿ ಹೊಡೆದುಕೊಂಡರು. ಇದರಿಂದ ಸುಲಭದ ಕ್ಯಾಚ್ ಕೈಚೆಲ್ಲಿ ನವಾಜ್‌ಗೆ ಜೀವದಾನ ಸಿಕ್ಕಿತು. ಜೀವದಾನ ಪಡೆದ ನವಾಜ್ (50\28) ಮರು ಎಸೆತದಲ್ಲೇ ಸಿಕ್ಸರ್ ಸಿಡಿಸಿದರು.

ಇದಾಗ್ಯೂ ಅಕ್ಷರ್ ಪಟೇಲ್ ಅಪಾಯಕಾರಿ ಮಾಜ್ ಸದಾಕತ್ (23) ವಿಕೆಟ್ ಪಡೆಯುವ ಮೂಲಕ ಪಾಕ್‌ಗೆ ಮೂರನೇ ಆಘಾತ ನೀಡಿದರು. ಸದ್ಯ ಸೈಮ್ ಅಯೂಬ್ ಮತ್ತು ಹಸನ್ ನವಾಜ್ ಕ್ರೀಸ್‌ನಲ್ಲಿದ್ದು, ಪಾಕಿಸ್ತಾನ 12 ಓವರ್ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ತೀವ್ರ ಒತ್ತಡಕ್ಕೆ ಸಿಲುಕಿದೆ.