ಬೆಂಗಳೂರು: 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಗಮನಾರ್ಹ ಸಾಧನೆ ಮಾಡಿದ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಫೋನ್ ಕರೆ ಮಾಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಪೂವಮ್ಮ ಅವರ ಸಾಧನೆಯನ್ನು ಡಿಕೆ ಶಿವಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಶ್ಲಾಘಿಸಿದ್ದಾರೆ. ಇನ್ನು ಪೂವಮ್ಮಗೆ ಕರೆ ಮಾಡಿ ಮಾತಾನಾಡಿರುವ ಅವರು ಅಥ್ಲೆಟಿಕ್ಸ್ ಅನ್ನು ತಾವು ಸದಾ ಹತ್ತಿರದಿಂದ ಗಮನಿಸುತ್ತಿರುವುದಾಗಿ ಹೇಳಿರುವ ಡಿಕೆ ಶಿವಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾಗುವ ಸುದೀರ್ಘ ತರಬೇತಿ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ಮೆಚ್ಚಿದ್ದಾರೆ.
ತಮ್ಮ ಸಂದೇಶದಲ್ಲಿ ಅವರು “ಪೂವಮ್ಮ ಕರ್ನಾಟಕವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದಾರೆ” ಎಂದು ಹೇಳಿರುವ ಅವರು, ರಾಜ್ಯದ ಏಷ್ಯನ್ ಗೇಮ್ಸ್ ಚಾಂಪಿಯನ್‌ಗಳು ಸೇರಿದಂತೆ ಕರ್ನಾಟಕ ಮತ್ತು ಭಾರತವನ್ನು ಪ್ರತಿನಿಧಿಸಲು ಶ್ರಮಿಸುತ್ತಿರುವ ಯುವ ಕ್ರೀಡಾಪಟುಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
2026ರ ಏಷ್ಯನ್ ಗೇಮ್ಸ್‌ನ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಕಿರಣ್ ಪಹಲ್, ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿತ್ತ್ಯಾ ರಾಮರಾಜ್ ಅವರ ಭಾರತ ತಂಡ 3:29.69 ಸಮಯದಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದಿತ್ತು. ಬಹ್ರೇನ್ ಬೆಳ್ಳಿ ಹಾಗೂ ಚೀನಾ ಕಂಚಿನ ಪದಕ ಪಡೆದಿದ್ದವು.
ಪೂವಮ್ಮ ಅವರ ಪಾಲಿಗೆ ಈ ಸಾಧನೆ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. 36ರ ಹರೆಯದಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಭಾರತ ತಂಡದ ಚಿನ್ನದ ಗೆಲುವಿನಲ್ಲಿ ಕೊಡುಗೆ ನೀಡಿರುವ ಅವರು, ತಮ್ಮ ವೃತ್ತಿಜೀವನದ ಅನುಭವವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ಪೂವಮ್ಮ ಅವರ ಸಾಧನೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಡಿಕೆ ಶಿವಕುಮಾರ್ ಆಶಯ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಪೂವಮ್ಮ ಅವರ ಸಾಧನೆಯ ಬೆನ್ನಲ್ಲೇ ರಾಜ್ಯದ ಕ್ರೀಡಾ ವಲಯದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.






















