ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವದಾಖಲೆ ಬರೆದ ಭಾರತದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ತಮ್ಮ ನಾಯಕತ್ವದ ಮೊದಲ ಪಂದ್ಯದ ಟಾಸ್ ವೇಳೆಯೇ ತಂಡದ ಆಡುವ ಹನ್ನೊಂದರ ಬಳಗವನ್ನು (Playing XI) ಮರೆತು ನಗೆಪಾಟಲಿಗೀಡಾದ ಸ್ವಾರಸ್ಯಕರ ಪ್ರಸಂಗ ನಡೆದಿದೆ.
ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2026-27ರ ಉದ್ಘಾಟನಾ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಬಿಹಾರ ತಂಡವನ್ನು ಮುನ್ನಡೆಸುವ ಮೂಲಕ 15 ವರ್ಷ 232 ದಿನಗಳ ವಯಸ್ಸಿನ ವೈಭವ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೈಭವ್ ಅವರನ್ನು ನಿರೂಪಕರು ತಂಡದ ಸಂಯೋಜನೆ ಮತ್ತು ಪ್ಲೇಯಿಂಗ್ XI ಕುರಿತು ಪ್ರಶ್ನಿಸಿದರು. ಈ ವೇಳೆ ಕ್ಷಣಕಾಲ ಯೋಚಿಸಿದ ವೈಭವ್ ಮುಗ್ಧ ನಗೆ ಬೀರುತ್ತಾ, “ನನಗನ್ನಿಸುತ್ತೆ ಸರ್, ನಾನು ಮರೆತುಬಿಟ್ಟಿದ್ದೇನೆ (ಭೂಲ್ ಗಯಾ ಸರ್)” ಎಂದು ಉತ್ತರಿಸಿದರು.
ಈ ತಮಾಷೆಯ ಕ್ಷಣ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಟಾಸ್ ಮರೆವಿನ ಪ್ರಸಂಗಗಳನ್ನು ನೆನಪಿಸುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಪಂದ್ಯದೊಂದಿಗೆ ಕ್ರೊಯೇಷಿಯಾದ ಝಾಕ್ ವುಕುಸಿಕ್ (17 ವರ್ಷ 311 ದಿನ) ಅವರ ಹೆಸರಲ್ಲಿದ್ದ ಅತ್ಯಂತ ಕಿರಿಯ ಟಿ20 ನಾಯಕನ ದಾಖಲೆಯನ್ನು ವೈಭವ್ ಅಳಿಸಿಹಾಕಿದ್ದಾರೆ.
ನಾಯಕತ್ವದ ಬಗ್ಗೆ ಮಾತನಾಡಿದ ವೈಭವ್, “ನಾನು ಕ್ರಿಕೆಟ್ ಆಡಲು ಆರಂಭಿಸಿದ ರಾಜ್ಯವನ್ನೇ ಮುನ್ನಡೆಸುವ ಅವಕಾಶ ಸಿಕ್ಕಿರುವುದು ಕನಸು ನನಸಾದಂತಾಗಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ” ಎಂದರು.
ಆದರೆ ಬ್ಯಾಟಿಂಗ್ನಲ್ಲಿ ವೈಭವ್ ಕೇವಲ 12 ಎಸೆತಗಳಲ್ಲಿ 18 ರನ್ ಗಳಿಸಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ಬಿಹಾರ 20 ಓವರ್ಗಳಲ್ಲಿ 9 ವಿಕೆಟ್ಗೆ 137 ರನ್ ಗಳಿಸಲಷ್ಟೇ ಶಕ್ತವಾಗಿ, ಸೌರಾಷ್ಟ್ರ ವಿರುದ್ಧ 5 ವಿಕೆಟ್ಗಳ ಸೋಲು ಕಂಡಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ ಬಳಿಕ ವೈಭವ್, ದೋಹಾದಲ್ಲಿ ನಡೆಯಲಿರುವ ಎಸಿಸಿ ರೈಸಿಂಗ್ ಸ್ಟಾರ್ಸ್ ಎಮರ್ಜಿಂಗ್ ಟೂರ್ನಮೆಂಟ್ನಲ್ಲಿ ಭಾರತ ‘ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ.






















