ಮುಲ್ಲನ್ಪುರ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಸೀಸನ್‌ನ ರೋಚಕ ಅಂತ್ಯ ಸಮೀಪಿಸುತ್ತಿದ್ದು, ಫೈನಲ್ ಪ್ರವೇಶಿಸುವ ಎರಡನೇ ತಂಡ ಯಾವುದು ಎಂಬುದನ್ನು ನಿರ್ಣಯಿಸಲು ಇಂದು ಮಹತ್ವದ ‘ಕ್ವಾಲಿಫೈಯರ್ 2′ ಪಂದ್ಯ ನಡೆಯಲಿದೆ.
ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಈ ಎರಡೂ ತಂಡಗಳಿಗೆ ಇದು ಕೊನೆಯ ಮತ್ತು ನಿರ್ಣಾಯಕ ಅವಕಾಶವಾಗಿದೆ.
ಎರಡೂ ತಂಡಗಳು ವಿಭಿನ್ನ ಪರಿಸ್ಥಿತಿಗಳೊಂದಿಗೆ ಈ ಪಂದ್ಯಕ್ಕೆ ಸಜ್ಜಾಗಿವೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಗ್ರ ಎರಡರಲ್ಲಿ ಸ್ಥಾನ ಪಡೆದಿದ್ದ ಗುಜರಾತ್ ಟೈಟನ್ಸ್, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತು ಆಘಾತ ಅನುಭವಿಸಿತ್ತು. ಹೀಗಾಗಿ ಇಂದು ಗೆದ್ದು ಪ್ರಶಸ್ತಿ ರೇಸ್‌ನಲ್ಲಿ ಉಳಿಯುವ ತವಕದಲ್ಲಿದೆ. ಮತ್ತೊಂದೆಡೆ, ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವು ಗೆಲುವಿನ ಉತ್ಸಾಹದಲ್ಲಿದೆ.
ಗುಜರಾತ್ ತಂಡಕ್ಕೆ ನಾಯಕ ಶುಭಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ಬಲವಿದೆ. ಬೌಲಿಂಗ್‌ನಲ್ಲಿ ಕಗಿಸೊ ರಬಾಡ ಹಾಗೂ ರಶೀದ್ ಖಾನ್ ಎದುರಾಳಿಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಉತ್ತಮ ಫಾರ್ಮ್‌ಲ್ಲಿದ್ದಾರೆ.






















