ಮುಂಬೈ: ತಾಯಿ ತಂದೆ ಮಕ್ಕಳನ್ನು ಚಿಕ್ಕವರು ಇದ್ದಾಗ ಹೂವಿನಂತೆ ಜೋಪಾನ ಮಾಡಿ ಬೆಳಸುತ್ತಾರೆ ಆದರೆ ತಂದೆ-ತಾಯಿ ವಯಸ್ಸಾದಾಗ ಮಕ್ಕಳು ಅವರನ್ನು ಮಗು ತರಹ ನೋಡಿಕೊಳ್ಳಬೇಕು ಆದರೆ ಒಬ್ಬ ಮಗ ತಂದೆಯ ಪ್ರೀತಿ ಆಸ್ತಿಗಾಗಿ ಬಳಸಿ ಕೊನೆಗಾಲದಲ್ಲಿ ಅನಾಥ ಆಶ್ರಮಕ್ಕೆ ಹಾಕಿದ್ದಾರೆ. ಅಂತಹ ಮಗ ಮತ್ತು ಸೊಸೆಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ಮುಂಬೈನ ಮಲಾಡ್ನಲ್ಲಿ ವಾಸವಿದ್ದ ದೇವ್ಚಂದ್ ಕೋರ್ಶಿ ದೇಧಿಯಾ (88) ಅವರ ಬದುಕಿನ ಕಣ್ಣೀರ ಕಥೆಯಿದು. ತಮ್ಮ ಯೌವನದಲ್ಲಿ ರಕ್ತ ಬಸಿದು, ಪತ್ನಿ ಮಂಜುಳಾ ಜೊತೆಗೂಡಿ 1999ರಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದರು. ಆದರೆ, 2015ರಲ್ಲಿ ಪತ್ನಿ ಇಹಲೋಕ ತ್ಯಜಿಸಿದ ಬಳಿಕ ವೃದ್ಧ ತಂದೆ ಅಕ್ಷರಶಃ ಒಂಟಿಯಾದರು. ಇದನ್ನೇ ಬಂಡವಾಳ ಮಾಡಿಕೊಂಡ ಹಿರಿಯ ಮಗ ಶಿಬನ್ ಮತ್ತು ಸೊಸೆ ರೀಟಾ, “ನಾವು ನಿಮ್ಮನ್ನು ಜೀವಮಾನವಿಡೀ ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳುತ್ತೇವೆ” ಎಂದು ನಂಬಿಸಿದರು.
ಮುಂದೆ ತಂದೆ ನಾನು ಕೊನೆಯವರೆಗೂ ಇದೆ ಮನೆಯಲ್ಲಿ ಇರುತ್ತೆನೆ ಎಂದು ಕರಾರು ಮಾಡಿ 2018 ರಲ್ಲಿ ಮಗನ ಹೆಸರಿಗೆ ಫ್ಲಾಟ್ ಬರೆದು ಕೊಟ್ಟರು.
ಆಸ್ತಿ ಕೈಗೆ ಬಂದಂತೆ ಸಂಬಂಧದ ಬಣ್ಣ ಬದಲಾಯ್ತು
ಆದರೆ, ಕಾನೂನುಬದ್ಧವಾಗಿ ಮನೆ ಕೈಗೆ ಬರುತ್ತಿದ್ದಂತೆ ಮಗ-ಸೊಸೆಯ ಅಸಲಿ ಮುಖವಾಡ ಕಳಚಿಬಿದ್ದಿತು. ಇಳಿಹರೆಯದ ತಂದೆಯನ್ನು ಕೀಳಾಗಿ ಕಾಣಲು ಶುರುಮಾಡಿದರು. ಇಡೀ ಜಗತ್ತೇ ಬೆಚ್ಚಿಬಿದ್ದಿದ್ದ ಕೊರೊನಾ ಲಾಕ್ಡೌನ್ ಸಮಯದಲ್ಲಿ, ಈ ವೃದ್ಧ ಜೀವವನ್ನು ಮನೆಯಿಂದ ಆಚೆ ನೂಕಲಾಯಿತು. ತಮ್ಮ ಸ್ವಂತ ಬಟ್ಟೆಬರೆ, ಔಷಧ, ಅಗತ್ಯ ದಾಖಲೆಗಳನ್ನು ತೆಗೆದುಕೊಳ್ಳಲೂ ಆ ಕ್ರೂರಿಗಳು ಬಿಡಲಿಲ್ಲ.
ಕೊನೆಗೆ ಹೇಗಾದರು ಮಾಡಿ ಕೈತೊಳೆದುಕೊಳ್ಳಲು ಗೊರೈನ ಅನಾಥ ಆಶ್ರಮಕ್ಕೆ ತಂದೆಯನ್ನು ಸೇರಿಸಿದರು.
ತಮಗಾದ ಅನ್ಯಾಯವನ್ನು ಸಹಿಸದ ದೇವ್ಚಂದ್, ಕೊನೆಗೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರತಿ ಸಾಠೆ ಅವರ ಪೀಠ, ಮಕ್ಕಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ತಂದೆ ತನ್ನ ಮಗನ ಮೇಲಿನ ಪ್ರೀತಿ, ವಾತ್ಸಲ್ಯ ಮತ್ತು ನಂಬಿಕೆಯಿಂದ ಆಸ್ತಿ ಬರೆದುಕೊಟ್ಟಿದ್ದಾರೆ. ತಂದೆಗೆ ಆಶ್ರಯ ನೀಡುವುದು ಮತ್ತು ಅವರನ್ನು ಗೌರವದಿಂದ ಸಾಕುವುದು ಮಕ್ಕಳ ಮೊದಲ ಕರ್ತವ್ಯ. ಬದುಕಿನ ಸಂಧ್ಯಾಕಾಲದಲ್ಲಿ, ಆರ್ಥಿಕವಾಗಿ ಅಸಹಾಯಕರಾಗಿರುವ ತಂದೆಯನ್ನು ಅನಾಥಾಶ್ರಮಕ್ಕೆ ದೂಡಿರುವುದು ಅಕ್ಷಮ್ಯ ಅಪರಾಧ. ಜೀವಮಾನವಿಡೀ ಆ ಮನೆಯಲ್ಲಿ ವಾಸಿಸುವ ಹಕ್ಕು ತಂದೆಗಿದೆ ಎಂದು ಬರೆದಿದ್ದರೂ ಅವರನ್ನು ಹೊರಹಾಕಿರುವುದು ಗಿಫ್ಟ್ ಡೀಡ್ನ ಉಲ್ಲಂಘನೆ,” ಎಂದು ನ್ಯಾಯಾಲಯ ಗುಡುಗಿತು.
ಮಗ ಮತ್ತು ಸೊಸೆಯ ಪರ ವಕೀಲರು ಮಂಡಿಸಿದ ಎಲ್ಲಾ ಕುಂಟು ನೆಪಗಳನ್ನು ಸಾರಾಸಾಗಟವಾಗಿ ತಳ್ಳಿಹಾಕಿದ ಹೈಕೋರ್ಟ್, 2018ರ ಗಿಫ್ಟ್ ಡೀಡ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. “ಮುಂದಿನ 15 ದಿನಗಳ ಒಳಗೆ ಫ್ಲ್ಯಾಟ್ ಅನ್ನು ತಂದೆಯ ಸುಪರ್ದಿಗೆ ಒಪ್ಪಿಸಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಮನೆ ಖಾಲಿ ಮಾಡದಿದ್ದರೆ, ಪೊಲೀಸರ ಸಹಾಯ ಪಡೆದು ಇಬ್ಬರನ್ನೂ ಮನೆಯಿಂದ ಹೊರಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದೆ.
ಸಮಾಜಕ್ಕೆ ಇದೊಂದು ಉತ್ತಮ ಪಾಠ ನ್ಯಾಯಾಲಯ ಕಲಿಸಿದೆ. ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ-2007 ಕೇವಲ ಕಾಗದದ ಕಾನೂನಲ್ಲ, ಅದು ಅಸಹಾಯಕ ಪೋಷಕರ ಪಾಲಿನ ರಕ್ಷಾಕವಚ ಎಂಬುದನ್ನು ಹೈಕೋರ್ಟ್ ಈ ತೀರ್ಪಿನ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ. ತಂದೆ ತಾಯಿಯ ಆಸ್ತಿಯನ್ನು ಕಬಳಿಸಿ ಅವರನ್ನು ಕಸದಂತೆ ಬಿಸಾಡುವ ಮಗ ಸೊಸೆಂದೆರೆಗೆ ಇದು ತಕ್ಕ ಪಾಠ. ಕೊನೆಗು 88 ವರ್ಷದ ಅಜ್ಜನಿಗೆ ನಿಟ್ಟುಸಿರು ಬಿಡಲು ಮನೆ ಮರಳಿದೆ.




















