ಹುಬ್ಬಳ್ಳಿ: ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ಆಕ್ಷೇಪಣಾ ಅರ್ಜಿಗಳನ್ನು (ಫಾರ್ಮ್-7) ಬಿಜೆಪಿ ಕಾರ್ಯಕರ್ತರು ಸಲ್ಲಿಸುವ ಮೂಲಕ ಮುಸ್ಲಿಂ ಮತದಾರರನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂಬ ಆರೋಪವನ್ನು ಕೇಂದ್ರ ಆಹಾರ ಮತ್ತು ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಸಾರಾಸಗಟಾಗಿ ತಳ್ಳಿ ಹಾಕಿದರು.
ಯಾರು ಬೇಕಾದರೂ ಫಾರ್ಮ್ 7 ಸಲ್ಲಿಸಬಹುದು. ಕಾಂಗ್ರೆಸ್ ಪಕ್ಷದ ಬಿಎಲ್ಎಗಳು (ಪಕ್ಷದ ಅಧಿಕೃತ ಏಜೆಂಟರು) ಚುರುಕಾಗಿಲ್ಲ ಎಂದರೆ ಯಾರೇನು ಮಾಡುವುದು? ಎಂದು ವ್ಯಂಗ್ಯವಾಡಿದರು.
`ಈ ಅರ್ಜಿ ನಮೂನೆಯು ಆನ್ಲೈನ್ನಲ್ಲಿ ಲಭ್ಯವಿದೆ. ಇದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿ ಆಕ್ಷೇಪಣೆಗಳನ್ನು ಸಲ್ಲಿಸಿರುವ ನಡೆಯಲ್ಲಿ ಕಾಯ್ದೆಬದ್ಧ ಲೋಪ ಇಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
`ಇಷ್ಟಕ್ಕೂ ಅರ್ಜಿಯನ್ನು ಸಲ್ಲಿಸಿದ ಮಾತ್ರಕ್ಕೆ ಯಾವ ಮತದಾರರ ಹೆಸರೂ ಡಿಲೀಟ್ ಆಗಲ್ಲ. ಸಲ್ಲಿಕೆಯಾದ ಫಾರ್ಮ್ 7 ಇಆರ್ಓ (ಚುನಾವಣಾ ನೋಂದಣಾಧಿಕಾರಿ) ಅವರಿಂದ ಪರಿಶೀಲನೆಯಾಗುತ್ತದೆ. ಮಾತ್ರವಲ್ಲದೇ, ಇಆರ್ಓಗಳು ಸ್ಥಳಕ್ಕೆ ತೆರಳಿ ಮಹಜರ್ ನಡೆಸಬೇಕು ಹಾಗೂ ಅಕ್ಕಪಕ್ಕದ ಮನೆಯವರ ಸಾಕ್ಷಿಗಳನ್ನು ಆಲಿಸಬೇಕು. ಅಂತಿಮವಾಗಿ ಮತದಾರ ಆ ವಿಳಾಸದಲ್ಲಿ ಇಲ್ಲ ಎಂಬುದು ಇಆರ್ಓಗೇ ಮನವರಿಕೆಯಾಗಬೇಕು. ಆಮೇಲೆ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಬೇಕು. ಇದೆಲ್ಲ ಪಾರದರ್ಶಕ ಪ್ರಕ್ರಿಯೆ. ಇದು ಇನ್ನಷ್ಟೇ ನಡೆಯಲಿದೆ’ ಎಂದು ಜೋಶಿ ವಿವರಿಸಿದರು. ನಾವು ಮುಸ್ಲಿಂ ಮತದಾರರನ್ನು ಮಾತ್ರ ಡಿಲೀಟ್ ಮಾಡುವಂತೆ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಗೆ ಅಂದುಕೊಂಡಿರುವಿರಿ? ಎಂದು ಕಾಂಗ್ರೆಸ್ ನಾಯಕರನ್ನು ಕಟುವಾಗಿ ಪ್ರಶ್ನಿಸಿದರು.
ವಿಷಯವಾಗಿ ಕೆಲವೆಡೆ ಬಿಎಲ್ಓ ಮತ್ತು ಬಿಎಲ್ಎಗಳ ವಿರುದ್ಧ ಸಲ್ಲಿಕೆಯಾಗಿರುವ ದೂರು ನ್ಯಾಯಾಲಯದಲ್ಲಿ ಊರ್ಜಿತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಇದರಲ್ಲಿ ಯಾವುದೇ ಅಪರಾ ತಪರಾ ನಡೆದಿಲ್ಲ ಎಂದು ಹೇಳಿದರು.



















