Home Advertisement
Home ಸುದ್ದಿ ರಾಜ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ – ನಾಳೆ ಶಿಕ್ಷೆ

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ – ನಾಳೆ ಶಿಕ್ಷೆ

0
378

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಉಂಟಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ.

ಪ್ರಕರಣದ ಹಿನ್ನೆಲೆ : 2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣವನ್ನು Central Bureau of Investigation (CBI) ತನಿಖೆ ನಡೆಸಿದ್ದು, ರಾಜಕೀಯ ದ್ವೇಷವೇ ಕೊಲೆಗೆ ಕಾರಣ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.

ಸಿಬಿಐ ಒಟ್ಟು 21 ಮಂದಿಯನ್ನು ಆರೋಪಿಗಳೆಂದು ಗುರುತಿಸಿದ್ದು, ಅವರಲ್ಲಿ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಹಾಗೂ ಶಾಸಕ ವಿನಯ್ ಕುಲಕರ್ಣಿ ಸೇರಿದ್ದರು. ಆರೋಪಿಗಳ ವಿರುದ್ಧ IPC ಸೆಕ್ಷನ್ 302 ಸೇರಿದಂತೆ ಹಲವಾರು ಗಂಭೀರ ಕಲಂಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ 2020ರಲ್ಲಿ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ನಂತರ ಜಾಮೀನು ದೊರೆತರೂ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಜೈಲಿನಲ್ಲಿದ್ದಾಗಲೇ ಗೆಲುವು ಸಾಧಿಸಿದ್ದರು. ಕಳೆದ ಆರು ವರ್ಷಗಳಿಂದ ಧಾರವಾಡ ಪ್ರವೇಶಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಗಮನಾರ್ಹವಾಗಿದೆ.

ಈಗ ದೋಷಿ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ, ನಾಳೆ ಪ್ರಕಟವಾಗಲಿರುವ ಶಿಕ್ಷೆಯ ಪ್ರಮಾಣವು ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಂತಿದೆ.