ಬೆಂಗಳೂರು: “ದೆಹಲಿಯಂತೆ ಬೆಂಗಳೂರಿಗೂ ಆದ್ಯತೆ ನೀಡಿ. ಮೆಟ್ರೋ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ 50:50 ಅನುಪಾತ ಎಂದು ಹೇಳಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಆರ್ಥಿಕ ಹೊರೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗಿದೆ. ಭೂಸ್ವಾಧೀನ ವೆಚ್ಚ, ವಿದೇಶಿ ಸಾಲ ಮರುಪಾವತಿ, ಕೇಂದ್ರ ಹಾಗೂ ರಾಜ್ಯ ತೆರಿಗೆ ಸೇರಿದಂತೆ ಎಲ್ಲವೂ ರಾಜ್ಯ ಸರ್ಕಾರಗಳ ಮೇಲೆ ಬಿದ್ದಿವೆ. ರಾಷ್ಟ್ರೀಕೃತ ಬ್ಯಾಂಕ್ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಜೊತೆಗೆ ಮೆಟ್ರೋ ಯೋಜನೆಯ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಬೇಕಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಂಜಿನಿಯರ್ಗಳು ಈ ನಗರವನ್ನು ಕಟ್ಟಿದ್ದಾರೆ. ಬೆಂಗಳೂರಿನಲ್ಲಿ 103 ಕಿ.ಮೀ ಮೆಟ್ರೋ ಸಂಪರ್ಕ ನಿರ್ಮಿಸಲಾಗಿದೆ. ನಮ್ಮ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 500 ಕಿ.ಮೀ ನಷ್ಟು ಮೆಟ್ರೋ ಸಂಪರ್ಕ ಹೊಂದುವ ಗುರಿ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ನಾವು ಅನೇಕ ಮಹತ್ತರ ಯೋಜನೆಗಳನ್ನು ಕೈಗೊಂಡಿದ್ದು, ಮೆಟ್ರೋ ಕೂಡ ಅದರ ಒಂದು ಪ್ರಮುಖ ಭಾಗವಾಗಿದೆ. ಇನ್ನು ಕಳೆದ ಎರಡು ವರ್ಷಗಳಿಂದ ಮೆಟ್ರೋ ಯೋಜನಾ ಅನುಮತಿ ಬಾಕಿ ಉಳಿದಿದ್ದು, ಕೆಂಪು ಮಾರ್ಗದ ಕಾಮಗಾರಿಯನ್ನು ನಾವು ಕೈಗೆತ್ತಿಕೊಳ್ಳಬೇಕಿದ್ದು, ಇದಕ್ಕೆ ಅನುಮತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡಿ ಎಂದರು.
ಈ ಯೋಜನೆಗಳಿಗೆ ನಾವು ಕೆಲವು ವರ್ಷಗಳ ಹಿಂದೆಯೇ ವಿಸ್ತೃತ ವರದಿ ಸಿದ್ಧಪಡಿಸಿದ್ದು, ಈ ವಿಳಂಬದಿಂದಾಗಿ ಯೋಜನಾ ವೆಚ್ಚ ಹೆಚಾಗಿದೆ. ಈಗ ಪರಿಷ್ಕೃತ ಡಿಪಿಆರ್ಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಈ ಅಭಿವೃದ್ಧಿ ಯೋಜನೆಗಳಿಗೆ ತ್ವರಿತ ಅನುಮತಿ ಸಿಗಬೇಕು. ಈ ವಿಳಂಬದಿಂದ ಹೆಚ್ಚುವ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೆ ಮಾಡಿಕೊಳ್ಳಬೇಕು. ಜತೆಗೆ ಕಾರ್ಯಾಚರಣೆ ವೆಚ್ಚದ ನಷ್ಟವನ್ನು ಎರಡೂ ಸರ್ಕಾರಗಳು ಸಮಾನವಾಗಿ ಭರಿಸಬೇಕಿದೆ. ದೆಹಲಿ ಮೆಟ್ರೋ ಮಾದರಿಯಲ್ಲೇ ವಿದೇಶಿ ಸಾಲ ಮರುಪಾವತಿಯಲ್ಲೂ ಎರಡೂ ಸರ್ಕಾರಗಳು ಸಮಾನ ಹಂಚಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
“ಇಡೀ ವಿಶ್ವ ಭಾರತವನ್ನು ಬೆಂಗಳೂರು ಮುಖೇನ ನೋಡುತ್ತಿದೆ. ಮೆಟ್ರೋಗಾಗಿ ನಮಗೆ ಒಂದು ತಾಂತ್ರಿಕ ಸಂಸ್ಥೆ ಅಗತ್ಯವಿದ್ದು, ಇದರಿಂದ ಭಾರತದಲ್ಲಿರುವ ಎಲ್ಲಾ ಮೆಟ್ರೋ ನಗರಗಳಿಗೂ ನೆರವಾಗಲಿದೆ. ಮೆಟ್ರೋ ಯೋಜನೆಗಳನ್ನು ಈ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನುಸಾರ ಅನುಮತಿ ನೀಡಬಹುದು. ಇದರಿಂದ ಯೋಜನೆಗೆ ಅನುಮತಿಗೆ ವೇಗ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.
ಮೆಟ್ರೋ ಸಂಪರ್ಕ 500 ಕಿ.ಮೀ.ಗೆ ವಿಸ್ತರಿಸುವ ಗುರಿ: ಕೇಂದ್ರಸ ಸಹಕಾರದೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕವನ್ನು 500 ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ 50% ಇಳಿಮುಖವಾಗಲಿದೆ. ಅಬ್ದುಲ್ ಕಲಾಂ ಅವರು ಕನಸು ಕಾಣಿ ಎಂದು ಹೇಳಿದ್ದಾರೆ. ನಾವು ಕನಸು ಕಾಣುವುದರ ಜತೆಗೆ ಕಂಡ ಕನಸನ್ನು ಸೂಕ್ತ ಯೋಜನೆ ಮೂಲಕ ಕಾರ್ಯಗತಗೊಳಿಸುತ್ತೇವೆ. ಇದಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಉತ್ತಮ ಮೆಟ್ರೋ ಕೆಲಸದಿಂದ ಜನಸಾಮಾನ್ಯರು ಸಂಚಾರ ದಟ್ಟಣೆಯಲ್ಲಿ ಕಡಿಮೆ ಸಮಯ ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದಾಗಿದೆ. ಬೆಂಗಳೂರಿನಲ್ಲಿ ಜನ ನಿತ್ಯ 2-3 ತಾಸು ಸಂಚಾರ ದಟ್ಟಣೆಯಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ನಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ ಎಂದರು.
ಬರ ಪರಿಹಾರ ನೀಡಿ ರೈತರಿಗೆ ನೆರವಾಗಿ: ನಮ್ಮ ರಾಜ್ಯ ತೀವ್ರ ಬರಗಾಲದಿಂದ ತತ್ತರಿಸಿದೆ. ಬರ ವಿಚಾರವಾಗಿ ನೀವು ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿದ್ದೀರಿ. ಈ ವರ್ಷ ಕಳೆದ 70 ವರ್ಷಗಳಲ್ಲೇ ಅತಿ ಕಡಿಮೆ ಮಳೆಯನ್ನು ಪಡೆದಿದ್ದೇವೆ. 240 ತಾಲ್ಲೂಕುಗಳಲ್ಲ್ಲಿ 226 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. 85 ಲಕ್ಷ ಹೆಕ್ಟೇರ್ ನಷ್ಟು ಬೆಳೆ ನಷ್ಟವಾಗಿದೆ. 62 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ 22 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ರೈತರಿಗೆ ತ್ವರಿತ ಸಹಾಯ ನೀಡಲು ಪರಿಹಾರ ಮೊತ್ತವನ್ನು ಬೇಗ ಬಿಡುಗಡೆ ಮಾಡಿ ನಮಗೆ ಸಹಕಾರ ನೀಡಿ. ಈ ವಿಚಾರವಾಗಿ ನಮ್ಮ ರಾಜ್ಯದಿಂದ ಸರ್ವಪಕ್ಷ ನಿಯೋಗವನ್ನು ನಿಮ್ಮ ಮುಂದೆ ಕರೆತಂದು ಪರಿಸ್ಥಿತಿ ವಿವರಿಸಲು ಬಯಸುತ್ತೇವೆ. ನಾವು ಕೂತು ಚರ್ಚೆ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬಹುದು ಎಂದು ವಿವರಿಸಿದರು.
ಎಥೆನಾಲ್ ಅನುದಾನದಲ್ಲಿ ನ್ಯಾಯಯುತ ಪಾಲು ನೀಡಿ: ಕಬ್ಬು ಬೆಳೆಗಾರರ ಸಮಸ್ಯೆ ಕೂಡ ಹೆಚ್ಚಾಗಿದ್ದು ರೈತರು ಪ್ರತಿ ಟನ್ ಕಬ್ಬಿಗೆ 5500 ರೂ. ಬೇಡಿಕೆ ಇಡುತ್ತಿದ್ದಾರೆ. 2019ರಿಂದ ದೇಶದಲ್ಲಿ ಸಕ್ಕರೆ ಎಂಎಸ್ಪಿ (ಕನಿಷ್ಠ ಮಾರಾಟ ದರ) 31 ರೂ.ಗೆ ಉಳಿದಿದೆ. ಇನ್ನು ಎಥೆನಾಲ್ ಅನುದಾನದಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಬೇಕಿದೆ” ಎಂದರು.
ರಾಜಕೀಯದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಭಾಗಿತ್ವ: ಪ್ರಧಾನಮಂತ್ರಿಗಳೇ ನಾವು ಜತೆಯಾಗಿ ಮುನ್ನಡೆಯೋಣ. ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಲು ಸಿದ್ಧವಿದೆ. ಭಾರತದ ಪ್ರಗತಿಯಲ್ಲಿ ಕರ್ನಾಟಕ ಪಯಣ ಸಾಗಲಿದೆ. ಮೆಟ್ರೋ ಎರಡು ಸ್ಥಳಗಳ ಮಧ್ಯೆ ಸಂಪರ್ಕ ಸಾಧಿಸಿರೆ, ಸಹಕಾರವು ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸಾಧಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸಾಗಿದರೆ ದೇಶ ಮುನ್ನಡೆಯುತ್ತದೆ ಎಂದು ತಿಳಿಸಿದರು.
ಚುನಾವಣೆಗಳು ವಿಭಿನ್ನ ರಾಜಕೀಯ ಜನಾದೇಶ ನೀಡಬಹುದು. ಆದರೆ ಜನರ ಆಶೋತ್ತರಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಾವು ರಾಜಕೀಯದಲ್ಲಿ ಸ್ಪರ್ಧೆ ಮಾಡೋಣ ಆದರೆ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಸಾಧಿಸೋಣ. ಕರ್ನಾಟಕ ಹಾಗೂ ಬೆಂಗಳೂರು ಬಲಿಷ್ಠವಾದಷ್ಟು ಭಾರತ ಪ್ರಗತಿ ಸಾಧಿಸುತ್ತದೆ. ಕರ್ನಾಟಕ ರಾಜ್ಯ ವಿಕಸಿತ ಭಾರತದಿಂದ ಹೊರತಾಗಿಲ್ಲ. ವಿಕಸಿತ ಭಾರತದ ಆಧಾರಸ್ತಂಭಗಳಲ್ಲಿ ಕರ್ನಾಟವೂ ಒಂದು. ನೀವು ನಮ್ಮ ಭಾವನೆ ಅರಿಯುವ ಭರವಸೆ ಇದೆ. ಭಾರತದ ಪ್ರಗತಿಗೆ ಕರ್ನಾಟ ಬದ್ಧವಾಗಿದ್ದು, ಅದಕ್ಕಾಗಿ ನಾವು ಸಹಕಾರ ನೀಡಲು ಸಿದ್ಧವಿದ್ದೇವೆ ಎಂದರು.




















