Home Advertisement
Home ಸುದ್ದಿ ರಾಜ್ಯ KSDL ಐತಿಹಾಸಿಕ ಸಾಧನೆ: 2016 ಕೋಟಿ ವಹಿವಾಟು 507 ಕೋಟಿ ಲಾಭ

KSDL ಐತಿಹಾಸಿಕ ಸಾಧನೆ: 2016 ಕೋಟಿ ವಹಿವಾಟು 507 ಕೋಟಿ ಲಾಭ

0
88

ಬೆಂಗಳೂರು: 110 ವರ್ಷಗಳ ಇತಿಹಾಸವಿರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) 2025–26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ ₹2,016 ಕೋಟಿ ವಹಿವಾಟು ನಡೆಸಿ ₹507 ಕೋಟಿ ಲಾಭ ಗಳಿಸಿದೆ. ಇದು ಸಂಸ್ಥೆಯ ಪಾಲಿಗೆ ಐತಿಹಾಸಿಕ ಮೈಲುಗಲ್ಲಾಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ ‘ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ’ ಕಾರ್ಯಕ್ರಮದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ಸಂಸ್ಥೆ ಮೊದಲ ₹1,000 ಕೋಟಿ ವಹಿವಾಟು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ ಈಗ ಕೇವಲ ನಾಲ್ಕು ವರ್ಷಗಳಲ್ಲಿ ₹2,000 ಕೋಟಿ ಗಡಿ ದಾಟಿದೆ” ಎಂದು ಹೇಳಿದರು.

2022–23ರಲ್ಲಿ ₹1,375 ಕೋಟಿ ವಹಿವಾಟು ನಡೆಸಿದ್ದ ಸಂಸ್ಥೆ, ಕಳೆದ ಮೂರು ವರ್ಷಗಳಲ್ಲಿ ₹641 ಕೋಟಿ ಹೆಚ್ಚಳ ಕಂಡು ₹2,016 ಕೋಟಿ ಮಟ್ಟ ತಲುಪಿದೆ. ಇದೇ ಅವಧಿಯಲ್ಲಿ ಉತ್ಪನ್ನಗಳ ಸಂಖ್ಯೆಯೂ ಹೆಚ್ಚಳ ಕಂಡಿದ್ದು, ಮೊದಲು 34 ಉತ್ಪನ್ನಗಳಿದ್ದ ಸಂಸ್ಥೆ ಈಗ 94 ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. ಯಾವುದೇ ಹೊಸ ನೇಮಕಾತಿ ಅಥವಾ ಯಂತ್ರೋಪಕರಣಗಳ ಖರೀದಿ ಇಲ್ಲದೆ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಸಂಸ್ಥೆಯ ₹507 ಕೋಟಿ ಲಾಭದಲ್ಲಿ ₹157 ಕೋಟಿ ಸರ್ಕಾರಕ್ಕೆ ಲಾಭಾಂಶವಾಗಿ ನೀಡಲಾಗುತ್ತಿದೆ. ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹5 ಕೋಟಿ ನೀಡಲಾಗುತ್ತದೆ. ಇದು ಹಿಂದಿನ ವರ್ಷದಿಗಿಂತ ₹22 ಕೋಟಿ ಹೆಚ್ಚಳವಾಗಿದೆ.

ಮುಂದಿನ ಗುರಿಗಳ ಬಗ್ಗೆ ಮಾತನಾಡಿದ ಸಚಿವರು, 2028ರೊಳಗೆ ₹3,000 ಕೋಟಿ ಮತ್ತು 2030ರೊಳಗೆ ₹5,000 ಕೋಟಿ ವಹಿವಾಟು ಸಾಧಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು. ವಿಜಯಪುರದಲ್ಲಿ 50 ಎಕರೆ ಪ್ರದೇಶದಲ್ಲಿ ₹229 ಕೋಟಿ ವೆಚ್ಚದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಅಗತ್ಯವಾದ ಗಂಧದ ಎಣ್ಣೆಯ ಪೂರೈಕೆಗೆ “ಗ್ರೋ ಮೋರ್ ಸ್ಯಾಂಡಲ್” ಯೋಜನೆ ಜಾರಿಗೆ ತರಲಾಗಿದ್ದು, 10 ವರ್ಷಗಳಲ್ಲಿ 10,000 ಎಕರೆ ಗಂಧದ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ. ರೈತರಿಗೆ ಪ್ರತಿ ಗಿಡಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆ ರೈತರಿಂದ 174 ಟನ್ ಗಂಧ ಖರೀದಿ ಮಾಡಿ ₹6.08 ಕೋಟಿ ನೇರ ಪಾವತಿ ಮಾಡಿದೆ.

ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಅವರು, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಮಾರಾಟ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮಾರುಕಟ್ಟೆಯಲ್ಲಿಯೂ ಪ್ರವೇಶಿಸುವ ಯೋಜನೆ ಇದೆ ಎಂದರು.

ಇತ್ತೀಚಿನ ಮಾಹಿತಿಯ ಪ್ರಕಾರ, ಸಂಸ್ಥೆ ದೇಶೀಯ ಮಾರುಕಟ್ಟೆಯ ಜೊತೆಗೆ ಜಾಗತಿಕ ಮಟ್ಟದಲ್ಲೂ ತನ್ನ ಹಾದಿಯನ್ನು ಬಲಪಡಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೃದ್ಧಿ ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.