Home Advertisement
Home ಸುದ್ದಿ ದೇಶ 4 ಲಕ್ಷದ ಬ್ಯಾಗ್ ತಂದಿಟ್ಟ ಸಂಕಷ್ಟ; ಪ್ರಾಣಿ ಹತ್ಯೆ ಮಾಡಿದ ಚರ್ಮದ ಬ್ಯಾಗ್ ಅನಿವಾರ್ಯವೇ? ವೈರಲ್...

4 ಲಕ್ಷದ ಬ್ಯಾಗ್ ತಂದಿಟ್ಟ ಸಂಕಷ್ಟ; ಪ್ರಾಣಿ ಹತ್ಯೆ ಮಾಡಿದ ಚರ್ಮದ ಬ್ಯಾಗ್ ಅನಿವಾರ್ಯವೇ? ವೈರಲ್ ಫೋಟೋದ ಹಿಂದಿನ ಅಸಲಿ ಸತ್ಯ!

0
72

ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ತಮ್ಮ ‘ಫೆಂಟಿ ಬ್ಯೂಟಿ’ ಬ್ರ್ಯಾಂಡ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಏಪ್ರಿಲ್ 24ರಂದು ಮುಂಬೈಗೆ ಆಗಮಿಸಿದ್ದರು. “ಫೆಂಟಿ ಬ್ಯೂಟಿ ಕಿ ಹವೇಲಿ” ಕಾರ್ಯಕ್ರಮದ ಭಾಗವಾಗಿ ಬಂದಿದ್ದ ಅವರು, ಮುಕೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.

ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬದ ಸದಸ್ಯರಾದ ಇಶಾ ಅಂಬಾನಿ, ಶ್ಲೋಕಾ ಮೆಹ್ತಾ ಮತ್ತು ಅನಂತ್ ಅಂಬಾನಿ ರಿಹಾನ್ನಾ ಅವರನ್ನು ಅತ್ಯಂತ ಸಡಗರದಿಂದ ಬರಮಾಡಿಕೊಂಡರು. ಸಾಂಪ್ರದಾಯಿಕ ನೃತ್ಯ, ಪೂಜೆ ಮತ್ತು ಆರತಿಯಲ್ಲಿ ಭಾಗವಹಿಸಿದ ರಿಹಾನ್ನಾ, ಹೂವಿನ ಹೋಳಿ ಆಡಿ ಸಂಭ್ರಮಿಸಿದರು. ಆದರೆ, ಈ ಭೇಟಿಯ ನಡುವೆ ಅವರು ಹಸುವಿಗೆ ಮೇವು ನೀಡುತ್ತಿರುವ ಫೋಟೋ ಒಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಅವರ ಕೈಯಲ್ಲಿದ್ದ ಐಷಾರಾಮಿ ‘ಡಿಯೋರ್’ (Dior) ಹ್ಯಾಂಡ್‌ಬ್ಯಾಗ್ ಮೇಲೆ ಬಿತ್ತು.

ಇದನ್ನು ಓದಿ: http://ಮಗನ ಚೊಚ್ಚಲ ಸಿನಿಮಾ ಸಮಾರಂಭದಲ್ಲಿ ಅಮೀರ್ ಖಾನ್ ಕಣ್ಣೀರು: ಬಾಲಿವುಡ್‌ಗೆ ಜುನೈದ್ ಖಾನ್, ಸಾಯಿ ಪಲ್ಲವಿ ಎಂಟ್ರಿ

ಸುಮಾರು 4.3 ಲಕ್ಷ ರೂಪಾಯಿ ಮೌಲ್ಯದ ಈ ಡಿಯೋರ್ ಬ್ಯಾಗ್ ತಯಾರಿಕೆಯಲ್ಲಿ ಕರು ಮತ್ತು ಕುರಿಯ ಚರ್ಮವನ್ನು (Calfskin and Lambskin) ಬಳಸಲಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ವಿವಾದ ಶುರುವಾಯಿತು. ಒಂದು ಕಡೆ ಪ್ರಾಣಿ ಪ್ರೇಮಿಯಂತೆ ಹಸುವಿಗೆ ಆಹಾರ ನೀಡುತ್ತಾ, ಮತ್ತೊಂದು ಕಡೆ ಪ್ರಾಣಿಗಳ ಚರ್ಮದಿಂದ ಮಾಡಿದ ಬ್ಯಾಗ್ ಹಿಡಿದಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬಂದವು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳ ಮಹಾಪೂರವೇ ಹರಿಯುತ್ತಿದೆ. ಒಬ್ಬ ಬಳಕೆದಾರರು “ತಾನು ತಿನ್ನುತ್ತಿರುವ ಆಹಾರ ಈ ಬ್ಯಾಗ್‌ನಿಂದ ಬಂದಿದ್ದೆಂದು ಆ ಹಸುವಿಗೆ ತಿಳಿಯದಿರಲಿ” ಎಂದು ವ್ಯಂಗ್ಯವಾಡಿದರೆ, ಮತ್ತೊಬ್ಬರು “ನಮ್ಮ ದೇಶದಲ್ಲೇ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂದು ಹೇಳಿ ಇಂತಹ ಉತ್ಪನ್ನಗಳನ್ನು ಬಳಸುವ ಡಬಲ್ ಸ್ಟ್ಯಾಂಡರ್ಡ್ ಜನರಿದ್ದಾರೆ, ಇವರನ್ನು ಯಾಕೆ ಕೇಳಬಾರದು?” ಎಂದು ಕಿಡಿಕಾರಿದ್ದಾರೆ.

ಆದರೆ ರಿಹಾನ್ನಾ ಪರವಾಗಿಯೂ ಕೆಲವರು ಮಾತನಾಡಿದ್ದಾರೆ. ಐಷಾರಾಮಿ ಸಂಸ್ಕೃತಿಯಲ್ಲಿ ಇಂತಹ ವಿರೋಧಾಭಾಸಗಳು ಸಹಜ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಹಾಸ್ಯದ ರೂಪದಲ್ಲಿ “ಹಸುವಿಗೆ ಆಹಾರ ನೀಡಿದರೆ ಅಲ್ವೇ ಮುಂದಕ್ಕೆ ಅದರ ಚರ್ಮ ಸಿಗುವುದು, ಇದೊಂದು ಸೈಕಲ್ ಅಷ್ಟೇ” ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ, ರಿಹಾನ್ನಾ ಅವರ ಈ ಮುಂಬೈ ಭೇಟಿ ಕೇವಲ ವ್ಯಾಪಾರಕ್ಕಾಗಿ ಮಾತ್ರವಲ್ಲದೆ, ಈ ಆಸಕ್ತಿದಾಯಕ ವಿವಾದದಿಂದಾಗಿಯೂ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.