ದಾವಣಗೆರೆ: ಹಾಡಹಗಲೇ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಶೇಖರಪ್ಪ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ನಾಯ್ಕ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳೂರು ತಾಲೂಕು ಮೂಲದ, ಶೇಖರಪ್ಪ ಬಡಾವಣೆಯಲ್ಲಿ ಮಕ್ಕಳೊಂದಿಗೆ ಲೀಸ್ ಮನೆಯಲ್ಲಿ ವಾಸವಾಗಿದ್ದ ನಾಗರತ್ನಮ್ಮ ಶಿವಲಿಂಗಪ್ಪ (50) ಹತ್ಯೆಯಾದವರು. ಗಂಡನೊಂದಿಗೆ ಮನಸ್ತಾಪದ ಹಿನ್ನೆಲೆಯಲ್ಲಿ ಮೂವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರತ್ನಮ್ಮ ಮತ್ತು ನಾಗರಾಜ ನಾಯ್ಕ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಇಬ್ಬರ ನಡುವೆ ಗೆಳೆತನವಿತ್ತು ಎನ್ನಲಾಗಿದೆ. ಈ ಸಂಬಂಧ ನಾಗರತ್ನಮ್ಮನ ಮಗ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಕೆ ನಾಗರಾಜನಿಂದ ದೂರವಾಗಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿದ್ದು, ದೂರು ಮತ್ತು ಪ್ರತಿ ದೂರುಗಳು ದಾಖಲಾಗಿದ್ದವು.
ಶನಿವಾರ ಬೆಳಗ್ಗೆ ನಾಗರಾಜ ನಾಯ್ಕ ನಾಗರತ್ನಮ್ಮನ ಮನೆಗೆ ಬಂದಿದ್ದು, ಆಕೆಯನ್ನು ಮೇಲ್ಮಹಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಹರಿತವಾದ ಆಯುಧದಿಂದ ನಾಗರತ್ನಮ್ಮನ ಕುತ್ತಿಗೆ ಸೀಳಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಗರತ್ನಮ್ಮ ಸಹಾಯಕ್ಕಾಗಿ ಕೂಗುತ್ತಾ ಮನೆಯ ಹೊಸ್ತಿಲಿಗೆ ಬರುವಷ್ಟರಲ್ಲಿ ಕುಸಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ನಾಗರಾಜ ನಾಯ್ಕನನ್ನು ಸ್ಥಳೀಯ ಯುವಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ.ಎಚ್.ಟಿ. ಶೇಖರ್, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಸ್‌ಒಸಿಒ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿತು. ಆರ್‌ಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ನಡುವೆ ಐದು ದೂರು, ಪ್ರತಿ ದೂರು: ನಾಗರತ್ನಮ್ಮ ಮತ್ತು ನಾಗರಾಜ ನಾಯ್ಕ ನಡುವೆ ಈ ಹಿಂದೆ ಒಟ್ಟು ಐದು ದೂರು, ಪ್ರತಿ ದೂರು ಪ್ರಕರಣಗಳು ದಾಖಲಾಗಿದ್ದವು ಎಂದು ಎಸ್ಪಿ ಡಾ. ಎಚ್.ಟಿ. ಶೇಖರ್ ತಿಳಿಸಿದ್ದಾರೆ. ಮಹಿಳೆಯ ಮೇಲಿನ ದೌರ್ಜನ್ಯ, ಕೊಲೆ ಯತ್ನ ಹಾಗೂ ನಾಗರತ್ನಮ್ಮನ ಮಗನ ಮೇಲೆ ಗಂಭೀರ ಹಲ್ಲೆ/ಕೊಲೆ ಯತ್ನ ಸೇರಿದಂತೆ ಪ್ರಕರಣಗಳು ದಾಖಲಾಗಿದ್ದವು. ಎರಡು ಪ್ರಕರಣಗಳು ರಾಜಿಯಾಗಿದ್ದರೆ, ಮತ್ತೊಂದು ಪ್ರಕರಣ ತನಿಖೆಯಲ್ಲಿದ್ದು, ಇನ್ನೊಂದು ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ನಾಗರತ್ನಮ್ಮನ ಮನೆಯಲ್ಲಿ ಇದ್ದ ವಸ್ತುಗಳನ್ನು ಆಕೆಯ ಅನುಮತಿ ಇಲ್ಲದೆ ನಾಗರಾಜ ನಾಯ್ಕ ತೆಗೆದುಕೊಂಡು ಹೋಗಿದ್ದಾನೆ ಎಂಬ ಬಗ್ಗೆಯೂ ದೂರು ದಾಖಲಾಗಿತ್ತು. ಎರಡೂ ಕಡೆಯವರು ಪೊಲೀಸ್ ಇಲಾಖೆಗೆ ದೂರುಗಳಲ್ಲದೆ ಅರ್ಜಿಗಳನ್ನೂ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಎಚ್ಚರಿಕೆ ನೀಡಲಾಗಿತ್ತು ಎಂದು ಎಂದು ತಿಳಿಸಿದ್ದಾರೆ.





















