ಬೆಂಗಳೂರು : ಸಫಾಯಿ ಕರ್ಮಚಾರಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ್ದ ಜಗದೀಶ್ ಹಿರೇಮನಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 55 ವರ್ಷದ ಹಿರೇಮನಿ ಅವರಿಗೆ ಏಕಾಏಕಿ ಹೃದಯಾಘಾತ ಉಂಟಾಗಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿದು ಅವರ ಬೆಂಬಲಿಗರು, ರಾಜಕೀಯ ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ.
ಹಿರೇಮನಿ ಅವರು ಭಾರತೀಯ ಜನತಾ ಪಕ್ಷ (BJP)ಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರು ಪಕ್ಷದ ಮಾಜಿ ಕಾರ್ಯದರ್ಶಿಯಾಗಿದ್ದು, ಪಕ್ಷ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಲಿ ಅವರು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ (SIR) ರಾಜ್ಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜಗದೀಶ್ ಹಿರೇಮನಿ ಅವರು ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯೊಂದಿಗೆ ನಂಟು ಹೊಂದಿದ್ದು, ಪಕ್ಷದ ತಳಮಟ್ಟದಿಂದ ಮೇಲ್ಮಟ್ಟದವರೆಗೆ ಶ್ರಮಿಸಿದ ನಾಯಕನಾಗಿ ಹೆಸರು ಮಾಡಿದ್ದರು. ಯುವ ನಾಯಕರಿಗೆ ಮಾರ್ಗದರ್ಶನ ನೀಡಿದವರು, ಸಂಘಟನಾತ್ಮಕ ಕಾರ್ಯದಲ್ಲಿ ಸಕ್ರಿಯರಾಗಿದ್ದವರು ಎಂಬ ಖ್ಯಾತಿ ಅವರಿಗೆ ಇತ್ತು.
ಅವರ ನಿಧನದ ಸುದ್ದಿ ತಿಳಿದ ಕೂಡಲೇ ಹಲವು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ರಾಜಕೀಯ ವಲಯದ ಗಣ್ಯರು ಮತ್ತು ವಿವಿಧ ಪಕ್ಷಗಳ ನಾಯಕರು ಕೂಡ ಸಂತಾಪ ಸೂಚಿಸಿದ್ದು, ಸಜ್ಜನ ರಾಜಕಾರಣಿಯ ಅಗಲಿಕೆಯಿಂದ ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.























