SK Home Ad
Home ಸುದ್ದಿ ರಾಜ್ಯ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸಂತೋಷ್‌ ಲಾಡ್‌ಗೆ ಮತ್ತೆ ಸಚಿವ ಸ್ಥಾನ

ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸಂತೋಷ್‌ ಲಾಡ್‌ಗೆ ಮತ್ತೆ ಸಚಿವ ಸ್ಥಾನ

0
102

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್‌ ಶಿವಾಜಿ ಲಾಡ್‌ ಅವರು ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಕಾರ್ಮಿಕ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಲಾಡ್‌, ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

1975ರ ಫೆಬ್ರವರಿ 27ರಂದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜನಿಸಿದ ಸಂತೋಷ್‌ ಲಾಡ್‌, ತಂದೆ ಶಿವಾಜಿ ಹಾಗೂ ತಾಯಿ ಶೈಲಜಾ ಅವರ ಪುತ್ರ. ಪತ್ನಿ ಕೀರ್ತಿ ಹಾಗೂ ಪುತ್ರ ಕರಣ್‌ ಅವರ ಕುಟುಂಬದಲ್ಲಿದ್ದಾರೆ.

ಬಳ್ಳಾರಿಯ ಎಜುಕೇಷನ್‌ ಸೊಸೈಟಿಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಲಾಡ್‌, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಕೆಟಿಗರಾಗಿದ್ದರು. ಅಂಡರ್-21 ರಾಜ್ಯಮಟ್ಟದ KSCA ಟೂರ್ನಿಯಲ್ಲಿ ತುಮಕೂರು ವಲಯ ತಂಡದ ನಾಯಕರಾಗಿಯೂ ಗುರುತಿಸಿಕೊಂಡಿದ್ದರು.

ರಾಜಕೀಯ ಪಯಣ: 1998ರಲ್ಲಿ ಸಂದೂರು ಟೌನ್‌ ಪಂಚಾಯತ್‌ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಸಂತೋಷ್‌ ಲಾಡ್‌, 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸಂಡೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ 2008 ಮತ್ತು 2013ರಲ್ಲಿ ಕಲಘಟಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2023ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಗೆದ್ದು ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು.

ಸಚಿವರಾಗಿ ಅನುಭವ: 2013ರಿಂದ 2018ರವರೆಗೆ ಮೊದಲ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ, ಮಾಹಿತಿ ಹಾಗೂ ಮೂಲಸೌಕರ್ಯ ಇಲಾಖೆಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2023ರಲ್ಲಿ ಎರಡನೇ ಬಾರಿಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಾರ್ಮಿಕ ಇಲಾಖೆಯ ಕ್ಯಾಬಿನೆಟ್‌ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು. ಇದೀಗ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಅವರ ರಾಜಕೀಯ ಜೀವನದ ಮತ್ತೊಂದು ಪ್ರಮುಖ ಘಟ್ಟವಾಗಿದೆ.

ಗಣಿಗಾರಿಕೆ ಕುಟುಂಬದ ಹಿನ್ನೆಲೆ: ಸಂತೋಷ್‌ ಲಾಡ್‌ ಅವರು 1950ರಿಂದ ಗಣಿಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಹಿನ್ನೆಲೆಯವರಾಗಿದ್ದಾರೆ. ಕ್ಷತ್ರಿಯ ಮರಾಠ ಸಮುದಾಯದ ಪ್ರಮುಖ ಮುಖಂಡರಾಗಿರುವ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಅನುಭವ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಕ್ಷೇತ್ರದಲ್ಲಿ ಹೊಂದಿರುವ ಹಿಡಿತದಿಂದ ಕಾಂಗ್ರೆಸ್‌ನ ಹಿರಿಯ ನಾಯಕರ ಸಾಲಿನಲ್ಲಿ ಸ್ಥಾನ ಪಡೆದಿರುವ ಸಂತೋಷ್‌ ಎಸ್. ಲಾಡ್‌ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ದೊರೆತಿರುವುದು ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿದೆ.