Home Advertisement
Home ನಮ್ಮ ಜಿಲ್ಲೆ ಮೈಸೂರು “ಹೈಕಮಾಂಡ್ ಹೇಳಿದರೆ 5 ವರ್ಷ ನಾನೇ CM”: ಸಿದ್ದರಾಮಯ್ಯ ಸ್ಪಷ್ಟನೆ

“ಹೈಕಮಾಂಡ್ ಹೇಳಿದರೆ 5 ವರ್ಷ ನಾನೇ CM”: ಸಿದ್ದರಾಮಯ್ಯ ಸ್ಪಷ್ಟನೆ

0
118

ಮೈಸೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಸ್ಥಿರತೆ, ಹೈಕಮಾಂಡ್ ನಿರ್ಧಾರಗಳು, ದೆಹಲಿ ಭೇಟಿಯ ಕುರಿತು ಹಾಗೂ ಶೃಂಗೇರಿ ಉಪಚುನಾವಣೆ ವಿವಾದದ ಬಗ್ಗೆ ಸಿಎಂ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸರ್ಕಾರದ ಅವಧಿ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಹೈಕಮಾಂಡ್ ಹೇಳಿದರೆ ನಾನು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ನಾನು ಹೈಕಮಾಂಡ್ ಮಾತನ್ನೇ ಕೇಳುತ್ತೇನೆ. ಯಾರೇ ಏನೇ ಹೇಳಿದರೂ ಅಂತಿಮ ನಿರ್ಧಾರ ಹೈಕಮಾಂಡ್‌ದೇ” ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಮುಂದುವರೆಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ದೆಹಲಿಗೆ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್‌ ಗಾಂಧಿ ತಮ್ಮನ್ನು ಇನ್ನೂ ದೆಹಲಿಗೆ ಕರೆದಿಲ್ಲ ಎಂದು ಹೇಳಿದರು. “ನಾನು ಕೂಡ ಅವರ ಭೇಟಿಗೆ ಸಮಯ ಕೇಳಿಲ್ಲ. ಅವರು ಕರೆದರೆ ಮಾತ್ರ ಹೋಗುತ್ತೇನೆ. ಸಭೆ ನಡೆಯದೇ ಇದ್ದಾಗ ಅಜೆಂಡಾ ಹೇಗೆ ನಿಗದಿಯಾಗುತ್ತದೆ?” ಎಂದು ಪ್ರಶ್ನಿಸಿದರು. ಸದ್ಯಕ್ಕೆ ದೆಹಲಿ ಪ್ರವಾಸದ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದರು.

ಇನ್ನು ಶೃಂಗೇರಿ ಉಪಚುನಾವಣೆ ಸಂಬಂಧ ಗಂಭೀರ ಆರೋಪಗಳನ್ನು ಮಾಡಿರುವ ಸಿಎಂ, ಅಂಚೆ ಮತಗಳ ತಿರುಚುವಿಕೆ ನಡೆದಿದೆ ಎಂದು ಆರೋಪಿಸಿದರು. “ಅಂದು ಬಿಜೆಪಿ ಸರ್ಕಾರ ಇತ್ತು. ಅವರ ನಿರ್ದೇಶನದಂತೆ ಚುನಾವಣಾ ಸಿಬ್ಬಂದಿಗಳು ಮತ್ತು D. N. ಜೀವರಾಜ್ ಸೇರಿಕೊಂಡು ಅಂಚೆ ಮತಗಳನ್ನು ತಿದ್ದಿದ್ದಾರೆ. ಫಲಿತಾಂಶದ ದಿನ ಮತಪತ್ರದಲ್ಲಿ ಇಲ್ಲದ ಗುರುತುಗಳು ಕಾಣಿಸಿಕೊಂಡಿವೆ” ಎಂದು ಹೇಳಿದರು. ಈ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿಸಿದರು.