ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವಾಸ್ತವ ಸ್ಥಿತಿ ವರದಿ ಸಲ್ಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾವಾರು ಸಚಿವರನ್ನು ನೇಮಕ ಮಾಡಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳು ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದರೆ, ಇನ್ನೂ ಕೆಲವು ಜಿಲ್ಲೆಗಳು ಮಳೆಯ ಕೊರತೆಯಿಂದ ಅನಾವೃಷ್ಟಿ ಮತ್ತು ಬರದ ಭೀತಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಜಿಲ್ಲೆಯ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ಹಾನಿಯ ಪ್ರಮಾಣ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಮೂಲಸೌಕರ್ಯ ಹಾನಿ ಸೇರಿದಂತೆ ವಿವಿಧ ಅಂಶಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ.
ಸಚಿವರು ತಮ್ಮ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ನೀಡಿ ರೈತರು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಜಿಲ್ಲೆಯ ವಸ್ತುಸ್ಥಿತಿ, ಅಗತ್ಯ ಪರಿಹಾರ ಕ್ರಮಗಳು ಮತ್ತು ತುರ್ತು ಕ್ರಮಗಳ ಕುರಿತು ವರದಿಯನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸಲಿದ್ದಾರೆ.
ಸರ್ಕಾರಕ್ಕೆ ಸಲ್ಲಿಕೆಯಾಗುವ ಈ ವರದಿಗಳ ಆಧಾರದ ಮೇಲೆ ಪರಿಹಾರ ಕಾರ್ಯಗಳಿಗೆ ವೇಗ ನೀಡುವುದು, ಅಗತ್ಯ ಅನುದಾನ ಬಿಡುಗಡೆ ಮಾಡುವುದು ಹಾಗೂ ಕೇಂದ್ರ ಸರ್ಕಾರಕ್ಕೆ ನೆರವು ಕೋರುವ ಪ್ರಸ್ತಾವನೆಗಳನ್ನು ಸಿದ್ಧಪಡಿಸುವ ಸಾಧ್ಯತೆ ಇದೆ.
ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿ, ರಸ್ತೆ, ಸೇತುವೆ, ಮನೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕಾ ಹಾಗೂ ಪರಿಹಾರ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ನಿರ್ಧಾರ ಮಹತ್ವದ್ದಾಗಿದೆ.
- ಗುಡುಗು-ಮಿಂಚಿನ ಅಬ್ಬರ: ಸಿಡಿಲು ಬಡಿದು ಮೂವರು ಸಾವು
- ‘ಹೈರಾಕ್ಸ್’ ಫಿಟ್ನೆಸ್ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಪರೂಪದ ಸಾಧನೆ
- 5ನೇ ವಯಸ್ಸಿನಲ್ಲಿ ವಿಶ್ವದಾಖಲೆ: ವಿಶ್ವದ ಅತ್ಯಂತ ಕಿರಿಯ ಮಹಿಳಾ ಯೋಗ ಶಿಕ್ಷಕಿ
- ಶಾಂತಿಪಾಲನೆಯಲ್ಲಿ ಭಾರತದ ಯೋಧರ ರಕ್ತ, ನಿರ್ಧಾರಗಳಲ್ಲಿ ಬೇರೆಯವರ ಅಧಿಪತ್ಯ: ವಿಶ್ವಸಂಸ್ಥೆಯ ಇಬ್ಬಂದಿತನ ಬಯಲು!
- ‘Raaka’ಗೆ ಗಿನ್ನೆಸ್ ವಿಶ್ವ ದಾಖಲೆ: 37 ಕಲಾವಿದರ ರಿಯಲ್ಟೈಮ್ ಮೋಷನ್ ಕ್ಯಾಪ್ಚರ್





















