SK Home Ad
Home ಸುದ್ದಿ ದೇಶ ಮೋದಿ ನನ್ನೊಂದಿಗೆ ಚರ್ಚೆಗೆ ಬರಲ್ಲ; ಬಂದರೆ ಅವರ ರಾಜಕೀಯ ಜೀವನ ಅಂತ್ಯ

ಮೋದಿ ನನ್ನೊಂದಿಗೆ ಚರ್ಚೆಗೆ ಬರಲ್ಲ; ಬಂದರೆ ಅವರ ರಾಜಕೀಯ ಜೀವನ ಅಂತ್ಯ

0
32

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ತಮ್ಮ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರೊಂದಿಗೆ ಮುಖಾಮುಖಿ ಬಹಿರಂಗ ಚರ್ಚೆಗೆ ತಾನು ಸಿದ್ಧನಿದ್ದು, ಚರ್ಚೆಗೆ ಬರುವಂತೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.

ಮೋದಿ ಅವರು ಬಹಿರಂಗ ಚರ್ಚೆಗೆ ಬಂದರೆ, ಅವರಿಗೆ ವಿದೇಶಿ ಬೆಂಬಲ ದೊರೆಯುತ್ತಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಮುಂದಿಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಮಹತ್ವದ ಪ್ರಶ್ನೆಗಳಿಗೂ ಈ ಚರ್ಚೆಯಲ್ಲಿ ಉತ್ತರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಆದರೆ, ಮೋದಿ ಅವರು ಎಂದಿಗೂ ತಮ್ಮೊಂದಿಗೆ ಚರ್ಚೆಗೆ ಬರುವುದಿಲ್ಲ. ಒಂದು ವೇಳೆ ಚರ್ಚೆಗೆ ಬಂದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಬಹುದು ಎಂಬ ಅರ್ಥದಲ್ಲಿ ರಾಹುಲ್ ಗಾಂಧಿ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ವಿಶೇಷ ತೀವ್ರ ಪರಿಷ್ಕರಣೆ (SIR), ಚೀನಾ ಅತಿಕ್ರಮಣ ಹಾಗೂ ಜನರಲ್ ಎಂ.ಎಂ. ನರವಣೆ ಅವರ ಪುಸ್ತಕ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಈ ಹಿಂದೆಯೂ ಹಲವು ಬಾರಿ ಸವಾಲು ಹಾಕಿದ್ದು, ಇದೀಗ ಮತ್ತೊಮ್ಮೆ ತಮ್ಮ ಸವಾಲನ್ನು ಪುನರುಚ್ಚರಿಸಿದ್ದಾರೆ.