ಬೆಂಗಳೂರು: ಬಿಡದಿ, ಕೆಪಿಎಸ್ಸಿ ಹಾಗೂ ನೈಸ್ ಯೋಜನೆಗಳ ವಿಚಾರಗಳು ಮತ್ತೆ ಚರ್ಚೆಗೆ ಬರುತ್ತಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಪ್ರಕರಣವೂ ರಾಜಕೀಯ ಕದನಕ್ಕೆ ಕಾರಣವಾಗಿದೆ.
ಜೈಲಿನಲ್ಲಿರುವ ಪ್ರಜ್ವಲ್ ಬಳಿ ಮೊಬೈಲ್ ಹಾಗೂ ಪೆನ್ಡ್ರೈವ್ ಸಿಕ್ಕಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎರಡು ವರ್ಷಗಳಿಂದ ಜೈಲಿನಲ್ಲಿರುವ ಪ್ರಕರಣವನ್ನು ಈಗ ಮತ್ತೆ ಮುನ್ನೆಲೆಗೆ ತಂದು ಹೊಸ ಕತೆ ಕಟ್ಟಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಜೈಲಿನೊಳಗೆ ಮೊಬೈಲ್ ಹಾಗೂ ಅಶ್ಲೀಲ ವಿಡಿಯೋಗಳು ಹೇಗೆ ತಲುಪಿದವು ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಡದಿ ಹಾಗೂ ನೈಸ್ ಯೋಜನೆಗಳ ವಿಚಾರದಲ್ಲಿ ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಪ್ರಜ್ವಲ್ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತರಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದರಿಂದ ಪ್ರಕರಣದ ಸುತ್ತ ರಾಜಕೀಯ ಆರೋಪ-ಪ್ರತ್ಯಾರೋಪ ಮತ್ತಷ್ಟು ತೀವ್ರಗೊಂಡಿದೆ.




















