SK Home Ad
Home ಸುದ್ದಿ ರಾಜ್ಯ ನಾನು ಕೇವಲ ಒಂದು ಸೆಲ್‌ನ ಹೋಂ ಮಿನಿಸ್ಟರ್ ಅಲ್ಲ… ಪ್ರಜ್ವಲ್ ಮೇಲಷ್ಟೇ ರೇಡ್ ಆಗಿಲ್ಲ

ನಾನು ಕೇವಲ ಒಂದು ಸೆಲ್‌ನ ಹೋಂ ಮಿನಿಸ್ಟರ್ ಅಲ್ಲ… ಪ್ರಜ್ವಲ್ ಮೇಲಷ್ಟೇ ರೇಡ್ ಆಗಿಲ್ಲ

0
22

ಕಲಬುರಗಿ: `ನಾನು ಕೇವಲ ಪರಪ್ಪನ ಅಗ್ರಹಾರದ ಒಂದು ಸೆಲ್‌ನ ಹೋಂ ಮಿನಿಸ್ಟರ್ ಅಲ್ಲ. ಪ್ರಜ್ವಲ್ ರೇವಣ್ಣನವರ ಸೆಲ್ ಮೇಲೆ ರೇಡ್ ಮಾಡಿಲ್ಲ, ಪರಪ್ಪನ ಅಗ್ರಹಾರ ಜೈಲಿನ ಮೇಲಿನ ದಾಳಿಯಾಗಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಹೋರಾಟ ಮತ್ತು ಕೆಪಿಎಸ್‌ಸಿ ಹಗರಣ ಡೈವರ್ಟ್ ಮಾಡಲು ಪ್ರಜ್ವಲ್ ರೇವಣ್ಣನ ಸೆಲ್ ಮೇಲೆ ರೇಡ್ ಮಾಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಟೀಕೆಗೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕೇವಲ ಪ್ರಜ್ವಲ್ ಮೇಲಷ್ಟೇ ದಾಳಿಯಾಗಿಲ್ಲ. ಎಲ್ಲರ ಮೇಲೂ ದಾಳಿ ನಡೆಸಲಾಗಿದೆ. ಅವರೊಬ್ಬರದೇ ಸಿಕ್ಕಿಲ್ಲ. ಬೇರೆಯವರದೂ ಸಿಕ್ಕಿದೆ. ಆದರೆ ಪ್ರಜ್ವಲ್‌ದು ಮಾತ್ರ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತುಗಳ ಬಳಕೆಯಾಗುತ್ತಿದೆ ಎಂಬ ಮಾಹಿತಿ, ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ, ಅದೇ ರೀತಿ ಬೆಳಗಾವಿ, ಮಂಡ್ಯ, ಕಲಬುರಗಿ ಜೈಲುಗಳ ಮೇಲೂ ದಾಳಿ ನಡೆಸಲಾಗಿದೆ ಎಂದರು.

`ನಾನು ಪರಪ್ಪನ ಅಗ್ರಹಾರಕ್ಕೆ ಸೀಮಿತನಾದ ಗೃಹಮಂತ್ರಿಯಲ್ಲ. ಸುಮ್ನೆ ಆರೋಪ ಮಾಡಿದ್ರೆ ಏನೂ ಮಾಡಲಾಗದು. ದೂರು ಬಂದಿದ್ದರಿಂದ ಸಹಜವಾಗಿಯೇ ದಾಳಿ ನಡೆಸಲಾಗಿದೆ. ದೂರು ಬಂದರೂ ಏನು ಮಾಡದಿದ್ದರೆ ಆಗಲೂ ನೀವು ನಮಗೇ ಬಯ್ಯುತ್ತೀರಿ, ಇಷ್ಟಕ್ಕೂ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದಂತೆ ಸಿಕ್ಕಿರುವ ವಿಡಿಯೋ ಕ್ಲಿಪ್ಪಿಂಗ್ 2025ರ ಡಿಸೆಂಬರ್ ತಿಂಗಳಿನದು, ಆ ಬಗ್ಗೆ ತನಿಖೆ ನಡೆಯುತ್ತಿದೆ, ಸತ್ಯಾಂಶ ಗೊತ್ತಾಗಲಿದೆ’ ಎಂದರು.