Home Advertisement
Home ಸುದ್ದಿ ರಾಜ್ಯ ರಾಜ್ಯದಲ್ಲಿ 800 KPS ಶಾಲೆ – 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ

ರಾಜ್ಯದಲ್ಲಿ 800 KPS ಶಾಲೆ – 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ

0
114

ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ; ಶಿವಮೊಗ್ಗದಲ್ಲಿ ಕೆಪಿಎಸ್ ಯೋಜನೆಗೆ ಚಾಲನೆ

ಬೆಂಗಳೂರು : ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವಿಧ ವಿಷಯಗಳ ಕುರಿತು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆ, ಶಿಕ್ಷಕರ ನೇಮಕಾತಿ, ಪರೀಕ್ಷಾ ಫಲಿತಾಂಶ ಸುಧಾರಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಿತು. ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು.

ಈ ಯೋಜನೆಯಡಿ ಒಂದು ಕೆಪಿಎಸ್ ಶಾಲೆಯಲ್ಲಿ ಸುಮಾರು 1,200 ಮಕ್ಕಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಎಲ್‌ಕೆಜಿ ಇಂದ ಪಿಯುಸಿ ವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು.

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ 800 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಲು ಸಂಬಂಧಿತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು. ಕೆಪಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಚಾರ ಸುಗಮಗೊಳಿಸಲು ಶಾಲಾ ಬಸ್ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ರಾಜ್ಯದ ಶಿಕ್ಷಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ತಕ್ಷಣವೇ ಆರ್ಥಿಕ ಇಲಾಖೆಗೆ ಸಲ್ಲಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳ ಸುಧಾರಣೆ ಕುರಿತ ಮಾಹಿತಿಯನ್ನೂ ಪರಿಶೀಲಿಸಲಾಯಿತು. ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.94.10ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.14.06ರಷ್ಟು ಹೆಚ್ಚಳವಾಗಿದೆ. ದ್ವಿತೀಯ ಪಿಯುಸಿಯಲ್ಲಿ ಶೇ.86.48ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದ್ದು, ಇದು ಕಳೆದ ಸಾಲಿನಿಗಿಂತ ಶೇ.13.03ರಷ್ಟು ಹೆಚ್ಚಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ 2,393 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಈ ಸಂಖ್ಯೆ 766 ಆಗಿತ್ತು. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಶೇ.18ರಷ್ಟು ಏರಿಕೆ ಕಂಡುಬಂದಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಇದಲ್ಲದೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಾಧನೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಕ್ಕಿಂತ ಉತ್ತಮ ಸಾಧನೆ ಮಾಡಿರುವುದು ವಿಶೇಷವಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಸ್ಎಸ್ಎಲ್‌ಸಿ ಉತ್ತೀರ್ಣ ಪ್ರಮಾಣ ಶೇ.94.80 ದಾಖಲಾಗಿದ್ದು, ನಗರ ಪ್ರದೇಶದಲ್ಲಿ ಶೇ.93.20 ದಾಖಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ.87.62 ಮತ್ತು ನಗರ ಪ್ರದೇಶದಲ್ಲಿ ಶೇ.85.95 ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿಲ್ಲ ಹಾಗೂ ಮೂರನೇ ಅಂತಿಮ ಪರೀಕ್ಷೆ ಇರುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಜೊತೆಗೆ ಉಚಿತ ನೋಟ್‌ಬುಕ್ ವಿತರಿಸುವ ಬೇಡಿಕೆಯ ಕುರಿತು ಕೂಡ ಸರ್ಕಾರ ಸಕಾರಾತ್ಮಕವಾಗಿ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.