SK Home Ad
Home ಸುದ್ದಿ ರಾಜ್ಯ ದುಬಾರಿಯಾದ ₹5 ಲಕ್ಷ ಘೋಷಣೆ: ಪ್ರಕಾಶ ಮಹಾಜನ್ ವಿರುದ್ಧ ಪ್ರಕರಣ, ಕ್ಷಮೆಯಾಚನೆ

ದುಬಾರಿಯಾದ ₹5 ಲಕ್ಷ ಘೋಷಣೆ: ಪ್ರಕಾಶ ಮಹಾಜನ್ ವಿರುದ್ಧ ಪ್ರಕರಣ, ಕ್ಷಮೆಯಾಚನೆ

0
58

ಚಿಕ್ಕೋಡಿ: ಲೇಖಕ ರವಿ ಹಂಜ್ ಅವರನ್ನು ಹತ್ಯೆ ಮಾಡಿದವರಿಗೆ ವೈಯಕ್ತಿಕವಾಗಿ ₹5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಅಥಣಿ ಪಟ್ಟಣದ ಲಿಂಗಾಯತ ಮುಖಂಡ ಪ್ರಕಾಶ ಮಹಾಜನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಕಾಶ ಮಹಾಜನ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವ ವೃತ್ತದಲ್ಲಿ ನವೆಂಬರ್ 21ರಂದು ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಾಶ ಮಹಾಜನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ್ದ ಅವರು, “ಬಸವಭಕ್ತರೆಲ್ಲರೂ ಒಂದಾಗಬೇಕು. ರವಿ ಹಂಜ್ ಅವರನ್ನು ಯಾರಾದರೂ ಕೊಲೆ ಮಾಡುವುದಾದರೆ ನನಗೆ ಕರೆ ಮಾಡಿ, ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಬಹಿರಂಗವಾಗಿ ಘೋಷಿಸಿದ್ದರು.

ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೇಖಕ ರವಿ ಹಂಜ್ ಅವರ ಹತ್ಯೆಗೆ ಬಹುಮಾನ ಘೋಷಿಸಿರುವುದು ಸರಿಯಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು.

ವಿವಾದಾತ್ಮಕ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಪ್ರಕಾಶ ಮಹಾಜನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಹಾಜನ್ ಕ್ಷಮೆಯಾಚಿಸಿದ್ದು, ವಿವಾದ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.