Ranya Rao: ಬಣ್ಣದ ಲೋಕದಲ್ಲಿ ಮಿಂಚಬೇಕಿದ್ದ ನಟಿಯೊಬ್ಬಳು ಅಡ್ಡದಾರಿಗಿಳಿದು ಜೈಲು ಹಕ್ಕಿಯಾಗಿದ್ದ ಸುದ್ದಿ ಇಡೀ ಸ್ಯಾಂಡಲ್‌ವುಡ್ ಅನ್ನು ಬೆಚ್ಚಿಬೀಳಿಸಿತ್ತು. ಹೌದು, ಬರೋಬ್ಬರಿ 102 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣದಲ್ಲಿ ಸಿಲುಕಿದ್ದ ಕನ್ನಡದ ನಟಿ ರನ್ಯಾ ರಾವ್ ಅವರಿಗೆ ಬರೋಬ್ಬರಿ ಒಂದು ವರ್ಷದ ಕಠಿಣ ಜೈಲುವಾಸದ ಬಳಿಕ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಇಂದು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.
ಏನಿದು ಪ್ರಕರಣ?: ಕಿಚ್ಚ ಸುದೀಪ್ ಅಭಿನಯದ ಹಿಟ್ ಸಿನಿಮಾ ‘ಮಾಣಿಕ್ಯ’ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ರನ್ಯಾ ರಾವ್, ಆನಂತರ ಸಿನಿಮಾಗಳಿಂದ ಬ್ರೇಕ್ ಪಡೆದು ದುಬೈ-ಬೆಂಗಳೂರು ನಡುವೆ ಬ್ಯುಸಿನೆಸ್ ಮಾಡುತ್ತಿದ್ದರು. ಪದೇ ಪದೇ ದುಬೈಗೆ ಹೋಗಿ ಬರುತ್ತಿದ್ದ ಇವರ ನಡೆ ಕಸ್ಟಮ್ಸ್ ಹಾಗೂ ಡಿಆರ್‌ಐ (DRI) ಅಧಿಕಾರಿಗಳಿಗೆ ಅನುಮಾನ ತರಿಸಿತ್ತು.
ಖಚಿತ ಮಾಹಿತಿ ಮೇರೆಗೆ 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದಾಗ ಅಧಿಕಾರಿಗಳು ರನ್ಯಾ ಅವರನ್ನು ತಡೆದು ತಪಾಸಣೆ ಮಾಡಿದ್ದರು. ಆಗ ಅವರ ಬಳಿ ಬರೋಬ್ಬರಿ 14.21 ಕೆಜಿ ಅಕ್ರಮ ಚಿನ್ನ ಪತ್ತೆಯಾಗಿತ್ತು. ವಿಚಾರಣೆ ವೇಳೆ, ಈಕೆ ಈ ಹಿಂದೆಯೂ ಸ್ಮಗ್ಲಿಂಗ್ ಮಾಡಿದ್ದು, ಒಟ್ಟು 102 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನವನ್ನು ಸಾಗಿಸಿದ್ದಾರೆ ಎಂಬ ಸ್ಫೋಟಕ ಸತ್ಯ ಬಯಲಾಗಿತ್ತು.
ಜಾಮೀನು ವಿಳಂಬವಾಗಿದ್ದೇಕೆ?: ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ರನ್ಯಾ, ರಾಸಲೀಲೆ ಸಿಡಿ ಪ್ರಕರಣದಲ್ಲಿ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅವರ ಮಲಮಗಳು. ಈ ಬೃಹತ್ ಚಿನ್ನದ ಜಾಲದ ಹಿನ್ನೆಲೆಯಲ್ಲಿ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB) ರನ್ಯಾ ವಿರುದ್ಧ ಅತ್ಯಂತ ಕಠಿಣವಾದ ‘ಕಾಫಿಪೋಸಾ’ (COFEPOSA – ಕಳ್ಳಸಾಗಣೆ ತಡೆ ಮತ್ತು ವಿದೇಶಿ ವಿನಿಮಯ ಸಂರಕ್ಷಣಾ ಕಾಯ್ದೆ) ಅಸ್ತ್ರ ಪ್ರಯೋಗಿಸಿತ್ತು. ಈ ಕಾಯ್ದೆಯಡಿ ಬಂಧಿತರಾದರೆ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೂಡ ಈ ಬಂಧನವನ್ನು ಎತ್ತಿಹಿಡಿದಿತ್ತು.
ಹಿಂದೆ ಕೋರ್ಟ್ ಜಾಮೀನು ನೀಡಿದ್ದರೂ, ಕಾಫಿಪೋಸಾ ಕಾಯ್ದೆಯ ಕಠಿಣ ನಿಯಮಗಳಿಂದಾಗಿ ಅವರು ಬಿಡುಗಡೆಯಾಗಿರಲಿಲ್ಲ. ಆದರೆ ಇದೀಗ ಆ ಕಾಯ್ದೆಯಡಿ ಒಂದು ವರ್ಷದ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಅವರಿಗೆ ಜಾಮೀನು ಒಲಿದುಬಂದಿದೆ.





















