ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಸುಂದರ ಸಂಸಾರಗಳನ್ನು ಬೀದಿಗೆ ತರುತ್ತಿವೆ. ಪ್ರೀತಿಸಿ, ನಂಬಿ ಕೈಹಿಡಿದ ಸಂಗಾತಿಯೇ ನಂಬಿಕೆ ದ್ರೋಹ ಮಾಡುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂಥದ್ದೇ ಒಂದು ಶಾಕಿಂಗ್ ಘಟನೆ ನಡೆದಿದ್ದು, ತನ್ನ ಪ್ರಾಣದ ಗೆಳೆಯನೇ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಜಿಮ್ ಟ್ರೈನರ್ ಒಬ್ಬರು ಕಣ್ಣೀರಿಡುತ್ತಿದ್ದಾರೆ.
ಬೆಂಗಳೂರಿನ ನಿತೇಶ್ ಎಂಬ ಯುವಕ ವೃತ್ತಿಯಲ್ಲಿ ಜಿಮ್ ಟ್ರೈನರ್. ಇವರು ಹಾಗೂ ನವೀನ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬಳನ್ನು ಪ್ರೀತಿಸಿ, ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯ ಬಳಿಕ ನಿತೇಶ್ ತನ್ನ ಗೆಳೆಯ ನವೀನ್‌ನ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು.
ಆದರೆ, ಮನೆಗೆ ಬರುತ್ತಿದ್ದ ನವೀನ್ ತನ್ನ ಗೆಳೆಯನ ಹೆಂಡತಿಯ ಮೇಲೆಯೇ ಕಣ್ಣು ಹಾಕಿದ್ದ. ಇತ್ತ ಪತ್ನಿ ಕೂಡ, ಗಂಡನಿಗೆ ಅನುಮಾನ ಬಾರದಿರಲಿ ಎಂದು ಪ್ರಿಯಕರ ನವೀನ್ ನಂಬರ್ ಅನ್ನು ಹುಡುಗಿಯೊಬ್ಬಳ ಹೆಸರಿನಲ್ಲಿ ಸೇವ್ ಮಾಡಿಕೊಂಡು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದಳು! ಗಂಡ ಈ ಬಗ್ಗೆ ವಿಚಾರಿಸಿದರೆ, ‘ಅವನು ನನಗೆ ಅಣ್ಣನ ಸಮಾನ’ ಎಂದು ನಾಟಕವಾಡುತ್ತಿದ್ದಳು.
ನಾಟಕವಾಡಿ ಮನೆ ಬಿಟ್ಟ ಮಹಿಳೆ: ಪತ್ನಿಯ ಈ ಕಳ್ಳಾಟ ನಿಧಾನವಾಗಿ ನಿತೇಶ್‌ಗೆ ತಿಳಿದುಬಂದಿತ್ತು. ಎಚ್ಚೆತ್ತ ಆತ, ಪತ್ನಿಗೆ ಕಟ್ಟುನಿಟ್ಟಾಗಿ ಬುದ್ಧಿವಾದ ಹೇಳಿ, ಆ ಮನೆಯನ್ನು ಖಾಲಿ ಮಾಡಿ ಬನಶಂಕರಿಯ ಬೇರೊಂದು ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಆದರೆ, ಆಕೆಯ ಕಳ್ಳಾಟ ಅಲ್ಲಿಯೂ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ‘ಹೊಟ್ಟೆನೋವು, ಕೆಲಸಕ್ಕೆ ಹೋಗುವುದಿಲ್ಲ’ ಎಂದು ನಾಟಕವಾಡಿದ್ದ ಪತ್ನಿ, ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ಅದೇ ನವೀನ್ ಜೊತೆ ಎಸ್ಕೇಪ್ ಆಗಿದ್ದಳು.
ಕೆಲಸ ಮುಗಿಸಿ ಮನೆಗೆ ಬಂದ ನಿತೇಶ್‌ಗೆ ಪತ್ನಿ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಆತ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ನವೀನ್ ಹಾಗೂ ಆಕೆಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ, ಠಾಣೆಯಲ್ಲಿ ಆಕೆ ಆಡಿದ ಮಾತು ಕೇಳಿ ನಿತೇಶ್ ಅಕ್ಷರಶಃ ಕುಸಿದುಹೋಗಿದ್ದಾರೆ. “ನಾನು ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ. ನನಗೆ ಆತನ ಜೊತೆ ಬಾಳಲು ಇಷ್ಟವಿಲ್ಲ, ಬೇಕಿದ್ದರೆ ಪಿಜಿಯಲ್ಲಿ ಇರುತ್ತೇನೆ” ಎಂದು ಹಠ ಹಿಡಿದಿದ್ದಾಳೆ.





















